ಸಸ ಬೋಧಿಸತ್ವರ ಮಹತ್ತರ ದಾನ
ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು. ಅದಕ್ಕೆ ಉದಾಹರಣೆಯೇ ಸಸ ಬೋಧಿಸತ್ವರ ಈ ದಾನಕಥೆ.ಬಹುಕಾಲದ ಹಿಂದೆ ಬೋಧಿಸತ್ವರು ಮೊಲವಾಗಿ ಹುಟ್ಟಿದ್ದರು. ಆದರೂ ಸಹಾ ಪೂರ್ವ ಜನ್ಮಗಳ ನೆನಪಿನಿಂದಾಗಿ ಹಾಗು ನಿರಂತರ ಆಚರಣೆಗಳಿಂದಾಗಿ ಅವರು ಮೊಲವಾಗಿ ಹುಟ್ಟಿದ್ದರೂ ಸಹಾ ಅವರು ದಾನವನ್ನು ಮರೆಯುತ್ತಿರಲಿಲ್ಲ, ಶೀಲವನ್ನು ಭಂಗ ಮಾಡುತ್ತಿರಲಿಲ್ಲ. ಹುಣ್ಣಿಮೆಯ ದಿನ ಉಪೋಸಥ ವ್ರತಗಳನ್ನು ಪಾಲಿಸುತ್ತಿತ್ತು. ಹಾಗೆಯೇ ತನ್ನಂತೆ ಇತರರನ್ನು ದಾನಿಗಳಾಗಿ, ಶೀಲವಂತರಾಗಿ ಪರಿವತರ್ಿಸಲು ಯತ್ನಿಸುತ್ತಿತ್ತು. ಅದರಂತೆಯೇ ಅದಕ್ಕೆ ನೀರುಬೆಕ್ಕು, ನರಿ ಮತ್ತು ಕೋತಿಗಳ ಸ್ನೇಹ ಉಂಟಾಯಿತು. ಅವಕ್ಕೂ ಅದು ಬೋಧನೆ ನೀಡಿ ಧಮ್ಮದಲ್ಲಿ ಪ್ರತಿಷ್ಠಾಪಿಸಿತ್ತು.
ಹೀಗೆ ಕಾಲದ ಪ್ರಯೋಜನ ಪಡೆಯುತ್ತಿರಬೇಕಾದರೆ ಒಂದುದಿನ ಚಂದ್ರನನ್ನು ಕಂಡು ಮೊಲವು ತನ್ನ ಸ್ನೇಹಿತರಾದ ಬೆಕ್ಕು, ನರಿ ಮತ್ತು ಕೋತಿಗಳಿಗೆ ಹೀಗೆ ಹೇಳಿತು: ನಾಳೆ ಹುಣ್ಣಿಮೆ, ನಾಳೆ ಶೀಲಗ್ರಹಣೆ ಮಾಡಿ ಪಾಲಿಸುತ್ತ ಉಪವಾಸದಲ್ಲಿ ತೊಡಗಿ, ಯಾಚಕರು ಯಾರೇ ಆಗಿರಲಿ ಅವರಿಗೆ ದಾನ ನೀಡೋಣ ಎಂದು ಅವರ ಮನವೊಲಿಸಿತು.
ಅದರಂತೆಯೇ ಅವು ಅಂದು ಶೀಲವನ್ನು ಪಾಲಿಸುತ್ತ, ಉಪವಾಸದಲ್ಲಿ ತೊಡಗಿ ಮೈತ್ರಿಯ ಚಿಂತನೆ ಮಾಡುತ್ತಾ, ದಾನ ನೀಡಲು ಯಾಚಕರಿಗೆ ಕಾಯುತ್ತ ಇದ್ದವು.
ಇವುಗಳ ಧಮರ್ಾಚರಣೆಯೂ ಇಂದ್ರನ ಗಮನಕ್ಕೂ ಬಂದಿತು. ಆತನು ಇವರೆಲ್ಲರನ್ನು ಪರೀಕ್ಷಿಸಲು ಬಂದನು. ಆತನು ಮೊದಲಿಗೆ ನೀರುಬೆಕ್ಕಿನ ಬಳಿಗೆ ಬಂದನು. ಅದು ಹತ್ತಿರದ ನೀರಿನಿಂದ ಏಳು ಕೆಂಪು ಮೀನುಗಳನ್ನು ತಂದು ದಾನ ನೀಡಬೇಕೆಂದು ಇಟ್ಟುಕೊಂಡಿತ್ತು. ಬ್ರಾಹ್ಮಣ ವೇಷಧಾರಿಯಾದ ಇಂದ್ರನಿಗೆ ಅದು ಏಳು ಕೆಂಪು ಮೀನುಗಳನ್ನು ನೀಡಲು ಮುಂದಾಯಿತು. ಆದರೆ ಬ್ರಾಹ್ಮಣ ಆಮೇಲೆ ಬರುತ್ತೇನೆ ಎಂದು ಹೊರಟನು.
ನಂತರ ಆ ಬ್ರಾಹ್ಮಣನು ನರಿಯ ಬಳಿಗೆ ಬಂದಾಗ, ಅದು ಸುಟ್ಟ ಮಾಂಸ ಮತ್ತು ಮೊಸರನ್ನು ದಾನವಾಗಿ ನೀಡಲು ಮುಂದಾಯಿತು. ಆದರೆ ಬ್ರಾಹ್ಮಣನು ಅದನ್ನು ಆಮೇಲೆ ಸ್ವೀಕರಿಸುವೆ ಎಂದು ಹೇಳಿ ಮುಂದೆ ನಡೆದನು.
ನಂತರ ಅವನು ಕೋತಿಯ ಬಳಿಗೆ ಬಂದಾಗ ಅದು ಮಾವಿನ ಗೊಂಚಲನ್ನು ನೀಡಲು ಮುಂದಾಯಿತು. ಆ ಬ್ರಾಹ್ಮಣನು ಪುನಃ ಬರುವೆ ಎಂದು ನುಡಿದು ಮೊಲದ ಬಳಿಗೆ ಬಂದರು.
ಆ ಸಮಯದಲ್ಲಿ ಮೊಲವು ದಾನದ ಬಗ್ಗೆ ಹೀಗೆ ಗಂಭೀರವಾಗಿ ಚಿಂತಿಸುತ್ತಿತ್ತು. ನಾನು ಯಾಚಕರಿಗೆ ಹುಲ್ಲು ನೀಡಲಾರೆ, ಎಳ್ಳಾಗಲಿ ಅಥವಾ ಅಕ್ಕಿಯಾಗಲಿ ನನ್ನಲ್ಲಿ ಇಲ್ಲ. ಆದ್ದರಿಂದ ನನ್ನ ದೇಹವನ್ನು ದಾನವಾಗಿ ನೀಡಿದರೆ ಹೇಗೆ?
ಅದೇ ಸಮಯದಲ್ಲಿ ಬ್ರಾಹ್ಮಣ ಅಲ್ಲಿಗೆ ಬಂದಾಗಿ ದಾನ ನೀಡಲು ಅದು ಅತ್ಯಂತ ಆನಂದವನ್ನೇ ವ್ಯಕ್ತಪಡಿಸಿತು. ಅದು ಬ್ರಾಹ್ಮಣನಿಗೆ ಹೀಗೆ ಹೇಳಿತು: ಓ ಬ್ರಾಹ್ಮಣ, ನನ್ನ ಬಳಿ ಯಾಚನೆಗೆ ಬಂದು, ಮಹದುಪಕಾರವನ್ನೇ ಮಾಡಿರುವೆ. ಆದರೆ ನನ್ನ ಬಳಿ ಅಕ್ಕಿಯಾಗಲಿ, ಎಳ್ಳಾಗಲಿ, ಕೊನೇಪಕ್ಷ ಹುಲ್ಲು ಸಹಾ ನನ್ನಲ್ಲಿಲ್ಲ. ಆದರೆ ನನ್ನ ದೇಹವೇ ದಾನಕ್ಕೆ ಸಿದ್ಧವಾಗಿದೆ, ದಯವಿಟ್ಟು ಸ್ವೀಕರಿಸಲು ಸಂಕೋಚಿಸಬೇಡ, ನೀನೇನು ಕೊಲ್ಲಬೇಕಾಗಿಲ್ಲ, ಕೇವಲ ಅಗ್ನಿಯನ್ನು ಸಿದ್ಧಪಡಿಸಿದರೆ ಸಾಕು, ನಾನು ಅಗ್ನಿಯನ್ನು ಕಂಪಿಸದೆ ಪ್ರವೇಶ ಮಾಡುವೆ, ನನ್ನನ್ನು ತಿಂದು ಸುಖವಾಗಿರು.
ಇಂದ್ರನು ಇದನ್ನು ಕೇಳಿ ಸ್ತಂಭೀಭೂತನಾದನು. ಆದರೂ ಪರೀಕ್ಷಿಸಲು ಮುಂದಾದನು. ಆತನು ಬೆಂಕಿಯನ್ನು ಸಿದ್ಧಪಡಿಸಿದನು. ಆಗ ಮೊಲವು ಅಗ್ನಿ ಪ್ರವೇಶಿಸುವ ಮುನ್ನ ದೇಹವನ್ನು ಪ್ರಬಲವಾಗಿ ಒದರಿತು.
ಅದನ್ನು ಕಂಡು ಇಂದ್ರನು ಓ ಮೊಲವೆ, ನಿನಗೆ ಭಯವಾದರೆ ಬೇಡ ಎಂದನು. ಆದರೆ ಆ ಮೊಲವು ಹೀಗೆ ಹೇಳಿತು: ಓ ಬ್ರಾಹ್ಮಣ, ನಾನು ದಾನ ನೀಡಲು ಎಂದಿಗೂ ನಡುಗಲಾರೆನು. ನಾನು ನನ್ನ ಶರೀರವನ್ನು ಒದರಿದ್ದು ಏಕೆಂದರೆ ಕೂದಲಿನಲ್ಲಿ ನೆಲೆಸಿರುವ ಕ್ರಿಮಿಗಳು ಅಗ್ನಿಗೆ ಆಹುತಿಯಾಗದಿರಲೆಂದು ಎಂದು ಹೇಳಿ ಅಗ್ನಿಯ ಮಧ್ಯೆ ಹೋಗಿ ಕುಳಿತಿತು. ಆದರೆ ಆಶ್ಚರ್ಯ ಬೆಂಕಿಯೇ ಅದಕ್ಕೆ ಸುಡಲಿಲ್ಲ. ಅದು ಆಶ್ಚರ್ಯದಿಂದಾಗಿ ಬ್ರಾಹ್ಮಣನಿಗೆ ನೋಡಿತು. ಆಗ ಇಂದ್ರನು ತನ್ನ ನಿಜರೂಪವನ್ನು ತೋರಿಸಿ ತಾನು ಪರೀಕ್ಷಿಸಲು ಬಂದಿದ್ದೆ ಎಂದು ಹೇಳಿದನು. ಆಗ ಮೊಲವು ಹೀಗೆ ಸಿಂಹನಾದ ಮಾಡಿತು: ಓ ಸಕ್ಕ, ನೀನೇ ಅಲ್ಲ, ಇಡೀ ಪ್ರಪಂಚದ ಯಾವ ವ್ಯಕ್ತಿಯೇ ಆಗಿರಲಿ, ನನ್ನಲ್ಲಿ ದಾನಕ್ಕೆ ವಿರುದ್ಧವಾದ ಇಚ್ಛೆಯನ್ನು ಕಾಣಲಾರರು. ಸದಾ ದಾನದ ಇಚ್ಛೆಯನ್ನು, ಆಚರಣೆಯನ್ನೇ ಕಾಣುವರು.
ಸಂತುಷ್ಟನಾದ ಇಂದ್ರನು ನಾಲ್ಕು ಪ್ರಾಣಿಗಳಿಗೂ ಹರಸಿ ಅಂತದರ್ಾನವಾದನು.

No comments:
Post a Comment