ಬೋಧಿಸತ್ವ ವೆಸ್ಸಂತರ
ಬಹುಕಾಲದ ಹಿಂದೆ ಸಿವಿ ರಾಷ್ಟ್ರವನ್ನು ಸಂಜಯಕುಮಾರನು ಆಳುತ್ತಿದ್ದನು. ಅವನ ಪಟ್ಟದರಸಿ ಪುಸತಿದೇವಿ. ಅವರಲ್ಲಿ ಹುಟ್ಟಿದವರೇ ವೆಸ್ಸಂತರ ಬೋಧಿಸತ್ವರು.
ಈ ಮಹಾಸತ್ವರು ಗರ್ಭದಲ್ಲಿರುವಾಗಲೇ ಅವರ ಪ್ರಭಾವದಿಂದಾಗಿ ತಾಯಿ ಪುಸತಿದೇವಿಯು ದಿನನಿತ್ಯ ಆರುಲಕ್ಷ ದಾನ ಮಾಡಬೇಕೆಂದು ಬಯಕೆಯಾಯಿತು. ಇದನ್ನು ಜ್ಯೋತಿಷಿಗಳಿಗೆ ತಿಳಿಸಿದಾಗ ಅವರು ಮಹಾದಾನಿ ಪುತ್ರನನ್ನು ಹಡೆಯುವಳು ಎಂದರು. ಬೋಧಿಸತ್ವರ ಗರ್ಭ ಪ್ರವೇಶದಿಂದಲೇ ರಾಜನ ಆದಾಯವು ಅಪರಿಮಿತವಾಯಿತು. ಪುಸತಿದೇವಿಯು ಒಮ್ಮೆ ನಗರವೀಕ್ಷಣೆಗೆ ಹೊರಟಾಗ ವೈಶ್ಯರ ಬೀದಿಯಲ್ಲಿ ಜನ್ಮಿಸಿದ್ದರಿಂದಾಗಿ ಆ ಬಾಲಕನಿಗೆ ವೆಸ್ಸಂತರ ಎಂದು ಕರೆಯಲಾಯಿತು.
ಆದರೆ ಈ ಮಹಾಮಹಿಮ ಬಾಲಕ ಗರ್ಭದಿಂದ ತೆರೆದ ಕಣ್ಣುಗಳಿಂದಲೇ ಹೊರಬಂದನು. ಹೊರಗೆ ಬರುತ್ತಿದ್ದಂತೆ ಆತನು ಬಲಗೈ ತೆರೆದು ಆತನು ತನ್ನ ತಾಯಿಯೊಂದಿಗೆ ಹೀಗೆ ಮಾತನಾಡಿದನು "ಅಮ್ಮ ನಾನು ದಾನ ಮಾಡಬೇಕು, ಬಹಳಷ್ಟು ದಾನ ಮಾಡಬೇಕು, ನಿನ್ನಲ್ಲಿ ಐಶ್ವರ್ಯವಿದೆಯೇ?" ಇದನ್ನು ಕೇಳಿದ ತಾಯಿಗೆ ಆನಂದವಾಯಿತು. ಆಕೆಯು ಕೈಯಲ್ಲಿದ್ದ ಸಾವಿರದ ಚೀಲ ಹಿಡಿದುಕೊಂಡು ಚಾಚಿ, ಆ ಬಾಲಕನ ಕೈಗೆ ಸ್ಪಶರ್ಿಸಿ ಹೀಗೆ ಹೇಳಿದಳು ಕಂದ ನೀನು ದಾನ ಮಾಡಲು ಬೇಕಾದಷ್ಟು ಇವೆ.
ಆತನು ಹುಟ್ಟಿದ ದಿನದಂದೇ ಸರ್ವಸುಲಕ್ಷಣಗಳಿಂದ ಕೂಡಿದ ಶ್ವೇತ ಆನೆಯು ಹುಟ್ಟಿತು. ಅದಕ್ಕೆ ಪ್ರತ್ಯಯ ಎಂದು ಹೆಸರಿಸಲಾಯಿತು. ಆ ಬಾಲಕನು ಬಾಲ್ಯದಿಂದಲೇ ದಾನಗಳನ್ನು ಹೃತ್ಪೂರ್ವಕವಾಗಿ ನೀಡಲಾರಂಭಿಸಿದರು. ದಾದಿಯರಿಗೆ ಆತನು ನೀಡಿದ ಆಭರಣಗಳೆಷ್ಟು?
ಆತನು ಎಂಟು ವರ್ಷದವನಾಗಿದ್ದಾಗಲೇ ಆತನು ದಾನದ ಬಗ್ಗೆ ಹೀಗೆ ಗಂಭೀರವಾಗಿ ಚಿಂತನೆ ಮಾಡಲಾರಂಭಿಸಿದನು.
" ನಾನು ನನ್ನ ಎಲ್ಲವನ್ನೂ ಸರ್ವಸ್ವವನ್ನೂ ದಾನ ಮಾಡಿಬಿಡುವೆ, ನಾನು ನನ್ನನ್ನೇ ದಾನವಾಗಿ ಕೊಡಲು ಬಯಸುತ್ತೇನೆ, ಯಾರಾದರೂ ಹೃದಯವನ್ನು ಕೇಳಿದರೂ ಬಗೆದು ಕೊಡುವೆನು. ಚಕ್ಷುಗಳನ್ನು ಕೇಳಿದರೂ ಕಿತ್ತು ನೀಡುವೆ, ಮಾಂಸವನ್ನು ಕೇಳಿದರೂ ನನ್ನ ಶರೀರದಿಂದಲೇ ಕತ್ತರಿಸಿ ನೀಡುವೆ".
ಈ ಚಿಂತನೆಗೆ ಇಡೀ ಭೂಮಿಯೇ ಸಂಭ್ರಮಿಸಿ ನಡುಗಿತು, ಭೂಕಂಪವಾಯಿತು. ವೆಸ್ಸಂತರ 16ರ ವಯಸ್ಸಿನಲ್ಲಿಯೇ ಸರ್ವವಿದ್ಯೆಗಳಲ್ಲಿ ನಿಪುಣರಾದರು. ಅವರಿಗೆ ಮಾದ್ರ ರಾಷ್ಟ್ರದ ರಾಜಕುಮಾರಿ ಮಾದ್ರಿಯೊಂದಿಗೆ ವಿವಾಹವಾಯಿತು. ಕಾಲನಂತರ ಅವರಿಗೆ ಜಾಲಿಕುಮಾರ ಎಂಬ ಪುತ್ರನು ಮತ್ತು ಕೃಷ್ಟಾಜಿನ ಎಂಬ ಪುತ್ರಿಯು ಹುಟ್ಟಿದರು.
ಪಕ್ಕದ ರಾಜ್ಯವಾದ ಕಳಿಂಗದ ಬ್ರಾಹ್ಮಣರು ಬೋಧಿಸತ್ವನ ಬಳಿಯಲ್ಲಿ ಬಂದು ಸಿವಿ ರಾಷ್ಟ್ರದವರ ಗೌರವದ, ಹೆಮ್ಮೆಯ, ಪುಣ್ಯದ ಸಂಕೇತವಾದ ಹಸ್ತಿರತ್ನವನ್ನು (ಆನೆಯನ್ನು) ದಾನವಾಗಿ ಕೇಳಿದರು.
ಅದನ್ನು ಆಲಿಸಿದ ವೆಸ್ಸಂತರರು ಹೀಗೆ ಯೋಚಿಸಿದರು: "ನಾನು ನನ್ನ ಶಿರದಿಂದ ಪಾದದವರೆಗೂ ದಾನ ನೀಡಬಯಸುತ್ತಿದ್ದೇನೆ. ಇವರು ಕೇವಲ ಬಾಹ್ಯವಸ್ತುವಾದ ಆನೆಯನ್ನು ಕೇಳುತ್ತಿದ್ದಾರೆ."
ತಕ್ಷಣವೇ ಅವರು ಆ ಆನೆಯ ಮೇಲಿದ್ದ ಕೋಟಿಗಳು ಬೆಲೆಬಾಳುವ ಆಭರಣಗಳ ಸಮೇತ ಆನೆಯನ್ನು ದಾನವಾಗಿ ನೀಡಿಬಿಟ್ಟರು. ಈ ದಾನದ ಸಮಯದಲ್ಲೂ ಭೂಕಂಪವಾಯಿತು. ಆದರೆ ಈ ದಾನದಿಂದ ಸಿವಿ ರಾಷ್ಟ್ರದವರು ಬೋಧಿಸತ್ವರ ಮೇಲೆ ಅಸಂತುಷ್ಟರಾದರು. ಅವರ ಹೆಮ್ಮೆಯ ಪ್ರತೀಕವಾಗಿದ್ದ ಹಸ್ತಿರತ್ನವನ್ನು ನೀಡಿದ್ದರಿಂದಾಗಿ ಅವರು ವೆಸ್ಸಂತರರನ್ನೇ ದೇಶದಿಂದ ಓಡಿಸುವ ರೀತಿ ಪ್ರತಿಭಟನೆ ಮಾಡಿದರು. ಇದರಿಂದಾಗಿ ತಂದೆಯಾದ ಸಂಜಯಕುಮಾರರು ಅಸಹಾಯಕರಾಗಿ ದೇಶದಿಂದ ಹೊರಹಾಕಲು ಅನುಮತಿ ನೀಡಿದರು.
ಆದರೂ ಸಹಾ ವೆಸ್ಸಂತರರು ವಿಚಲಿತರಾಗಲಿಲ್ಲ. ಅವರು ಹೀಗೆ ಯೋಚಿಸಿದರು:" ನಾನು ಕಂಪಿಸಲಾರೆನು, ದಾನ ನನಗೆ ಚೆಂದ, ನನ್ನನ್ನು ಬೇಕಾದರೆ ದೇಶದಿಂದ ಹೊರಹಾಕಲಿ, ಕತ್ತರಿಸಿಹಾಕಲಿ, ಕೊಲ್ಲಲಿ. ಆದರೆ ನನ್ನ ದಾನ ನಿಲ್ಲುವುದಿಲ್ಲ".
ಅವರು ದೇಶ ಬಿಟ್ಟು ಹೋಗುವಾಗಲು ಅಪಾರ ದಾನಗಳನ್ನು ಮಾಡಿದರು. ಅವರು ತಮ್ಮ ಪತ್ನಿಯಾದ ಮಾದ್ರಿಗೆ ಹೀಗೆ ಹೇಳಿದರು: ಹೇ ಮಾದ್ರಿ, ಅತ್ತೆಯಂದಿರ ಸೇವೆ ಮಾಡು, ಮಕ್ಕಳನ್ನು ಚೆನ್ನಾಗಿ ನೋಡಿಕೋ, ನನ್ನ ನಂತರ ಬೇರೆಯವರನ್ನು ವಿವಾಹವಾಗು. ಆದರೆ ಮಹಾ ಪತಿವ್ರತೆಯಾದ ಮಾದ್ರಿಯು ಇದಕ್ಕೆ ಒಪ್ಪಲಿಲ್ಲ. ಬೋಧಿಸತ್ವರ ಜೊತೆಗೆ ಅರಣ್ಯಕ್ಕೆ ಹೋಗುವೆ ಎಂದಳು. ತಾಯಿ ಪುಸತಿದೇವಿ ಹಾಗು ಬೋಧಿಸತ್ವರ ಶ್ರೇಯೋಭಿಲಾಷಿಗಳಾದ ಬಹುಮಂದಿ ಪ್ರಜೆಗಳು ಕಣ್ಣೀರಿನಿಂದ ಅವರನ್ನು ಅರಣ್ಯಕ್ಕೆ ಕಳಿಸಿಕೊಟ್ಟರು. ಹೀಗೆ ಬೋಧಿಸತ್ವ ಪತ್ನಿ, ಪುತ್ರ-ಪುತ್ರಿಯರೊಂದಿಗೆ ಕಾಡಿನ ಮಾರ್ಗದಲ್ಲಿ ರಥದಲ್ಲಿ ಹೋಗುವಾಗ ಯಾಚಿಸಿದವರಿಗೆ ಕುದುರೆಗಳನ್ನು ಮತ್ತು ಇನ್ನೋರ್ವನಿಗೆ ರಥವನ್ನು ದಾನವಾಗಿ ನೀಡಿಬಿಟ್ಟರು. ನಂತರ ವಂಕಪರ್ವತದ ಬಳಿಗೆ ವಾಸಿಸಲು ಹೊರಟರು. ದಾರಿಯಲ್ಲಿ ಚೇತಿಯ ರಾಷ್ಟ್ರದವರು ರಾಜ್ಯವನ್ನೇ ನೀಡುವೆ ಎಂದರೂ ಸ್ವೀಕರಿಸಿದೆ ಮುಂದೆ ನಡೆದರು. ಅಲ್ಲಿ ತಪಸ್ವಿಗಳ ಹಾಗೆ ವಸ್ತ್ರಧರಿಸಿ ತಾಪಸಿಗಳ ತರಹವೇ ಪರಿಶುದ್ಧವಾದ ಸರಳ ಜೀವನದಿಂದ ಜೀವಿಸತೊಡಗಿದರು.
ಪೂಜಕನೆಂಬ ಬ್ರಾಹ್ಮಣನೊಬ್ಬನು ತನ್ನ ಪತ್ನಿಯನ್ನು ತೃಪ್ತಿಪಡಿಸಲು ಸೇವಕನನ್ನು ಅಥವಾ ಹಣವನ್ನು ಸಂಗ್ರಹಿಸಲು ವೆಸ್ಸಂತರರನ್ನು ಭೇಟಿಮಾಡಿ ದಾನ ಪಡೆಯುವುದೇ ಲೇಸೆಂದು ನಿರ್ಧರಿಸಿ ಅವರನ್ನು ಹುಡುಕಿಕೊಂಡು ವಂಕ ಪರ್ವತದ ಸಮೀಪದ ಕುಟೀರಕ್ಕೆ ಬರುತ್ತಾನೆ. ಆತನು ಬೋಧಿಸತ್ವರ ಮಕ್ಕಳನ್ನು ದಾನವಾಗಿ ಕೇಳಬೇಕೆಂದು ನಿರ್ಧರಿಸುತ್ತಾನೆ. ಆತನು ಬೋಧಿಸತ್ವರ ಬಳಿಗೆ ಬರುತ್ತಾನೆ. ಆಗ ಬೋಧಿಸತ್ವರು ಆತನಿಗೆ ಹೀಗೆ ಹೇಳುತ್ತಾರೆ: ಓ ಬ್ರಾಹ್ಮಣ, ಯಾವ ಕಾರಣದಿಂದಾಗಿ ಈ ಕಾಡಿಗೆ ಬಂದಿದ್ದೀಯೆ?
ತುಂಬಿದ ನದಿಯು ಎಂದಿಗೂ ಕ್ಷಯಿಸುವುದಿಲ್ಲ, ಆದ್ದರಿಂದಲೇ ನಿಮ್ಮ ಬಳಿಗೆ ಬಂದಿದ್ದೇನೆ. ನನಗೆ ದಾನವಾಗಿ ನಿಮ್ಮ ಮಕ್ಕಳನ್ನು ನೀಡಿ.
ಬೋಧಿಸತ್ವರಿಗೆ ದಾನಕ್ಕೆ ಅವಕಾಶ ಸಿಕ್ಕಿತೆಂದು ಆನಂದಪಟ್ಟರು "ನಾನು ದಾನ ನೀಡಲು ನಡುಗಲಾರೆ, ಇನ್ನು ಮೇಲೆ ಇವರು ನಿನ್ನ ಮಕ್ಕಳೆ, ಇವರನ್ನು ಕರೆದುಕೊಂಡು ಹೋಗು" ಎಂದು ಮಹಾದಾನ ಮಾಡಿದರು. ಆದರೆ ಆ ಬ್ರಾಹ್ಮಣನು ಬರಲಿಚ್ಛಿಸದ ಮಕ್ಕಳನ್ನು ಬಳ್ಳಿಯಿಂದ ಕಟ್ಟಿಕೊಂಡು ಕೋಲಿನಿಂದ ಹೊಡೆಯುತ್ತ ಎಳೆದುಕೊಂಡು ಹೋದನು. ಇದನ್ನು ಬೋಧಿಸತ್ವರು ಕಂಡು ಮರುಗಿದರೂ ಸಹಾ, ದಾನ ನೀಡಿದ ಮೇಲೆ ಆ ಮಕ್ಕಳ ಹಕ್ಕು ಆತನದೆಂದು ಆತನನ್ನು ತಡೆಯಲಿಲ್ಲ.
ಹಣ್ಣುಗಳನ್ನು ತರಲೆಂದು ಹೋಗಿದ್ದ ಮಾದ್ರಿದೇವಿಯು ಹಿಂತಿರುಗಿ ಬಂದು ವಿಷಯ ತಿಳಿದು ಮೂಛರ್ಿತಳಾದಳು, ದುಃಖಿತಳಾದಳು. ಆದರೆ ಬೋಧಿಸತ್ವರಂತು "ಹೇ ಬ್ರಾಹ್ಮಣ ಲಕ್ಷ ಪುತ್ರರಿಗಿಂತ ಸಮ್ಮಾ ಸಂಬೋಧಿಯು ಅಥವಾ ಸರ್ವಜ್ಞತೆಯು ನನಗೆ ಅತ್ಯಂತ ಪ್ರಿಯಕರವಾದುದು" ಎಂದು ಹೇಳಿ ದಾನ ಮಾಡಿಬಿಟ್ಟಿದ್ದರು. ಅವರಿಗೆ ಮಕ್ಕಳು ಅತ್ಯಂತ ಪ್ರಿಯರಾಗಿದ್ದರು. ಆದರೂ ಅವರ ಗುರಿಯಾದ ಬುದ್ಧತ್ವಕ್ಕಾಗಿ ಬೋಧಿಸತ್ವರು ಮಹಾತ್ಯಾಗ ಮಾಡಿದ್ದರು. ಅವರಿಗೆ ತಕ್ಕ ಸಹಬಾಯರ್ೆಯಾಗಿದ್ದ ಮಾದ್ರಿದೇವಿಯು ಪುತ್ರ ವಿಯೋಗದಿಂದ ದುಃಖಿತಳಾದರೂ ಸಹಾ ಬೋಧಿಸತ್ವರ ಮೇಲೆ ವಿರೋಧ ಭಾವನೆ ವ್ಯಕ್ತಪಡಿಸಲಿಲ್ಲ. ಆಕೆ ಹೀಗೆಂದಳು: "ಹೇ ದೇವ, ನೀವು ನೀಡಿದ ಮಕ್ಕಳ ದಾನಕ್ಕೆ ನಾನು ಅನುಮೋದಿಸುತ್ತೇನೆ, ದೇವ ನೀವು ಮತ್ತಷ್ಟು ದಾನ ನೀಡುವವರಾಗಿ" ಎಂದು ಪ್ರೋತ್ಸಾಹಿಸಿದಳು. ದಾನದಲ್ಲಾಗಲಿ, ಶೀಲದಲ್ಲಾಗಲಿ, ಜ್ಞಾನದಲ್ಲಾಗಲಿ ಸಮಾನ ಅಭಿಪ್ರಾಯವನ್ನೇ ಆ ಮಾತೆಯು ಹೊಂದಿದ್ದಳು. ಹೀಗೆ ಇವರೀರ್ವರ ದಾನಶಕ್ತಿಯಿಂದಾಗಿ ಭೂಮಿ ಕಂಪಿಸಿತು, ಧಾತುಗಳು ಸಹಾ ಕಂಪನವಾದವು. ದೇವೇಂದ್ರನು ಎಚ್ಚೆತ್ತನು. ಆತನು ವೆಸ್ಸಂತರರ ಮನಸ್ಸನ್ನು ಅರಿತವನಾಗಿ ಯಾರಾದರೂ ಯಾಚಕರು ಪತ್ನಿಯನ್ನು ಕೇಳಿದರೂ ದಾನ ನೀಡಿಬಿಡುತ್ತಾನೆ. ಆದ್ದರಿಂದಾಗಿ ಈತನನ್ನು ಹಿತರಕ್ಷಣೆ ಮಾಡಬೇಕು ಎಂದು ಇಂದ್ರನು ಬ್ರಾಹ್ಮಣನ ವೇಷಧಾರಿಯಾಗಿ ವೆಸ್ಸಂತರರ ಬಳಿಗೆ ಬಂದು ದಾನ ಯಾಚಿಸುವಂತಹ ಮುಖ ಮಾಡಿದನು. ನಂತರ ಹೀಗೆ ಕೇಳಿದನು: ಓ ಮಹಾರಾಜ, ನಾನು ಮುದುಕನಾಗಿದ್ದೇನೆ. ನನಗೆ ನೋಡಿಕೊಳ್ಳಲು, ಸೇವೆ ಮಾಡಲು ಯಾರೂ ಇಲ್ಲದ ಕಾರಣ ನಿನ್ನಲ್ಲಿ ಸಹಾಯ ಯಾಚಿಸಲು ಬಂದಿದ್ದೇನೆ. ತುಂಬಿದ ನದಿಯು ಎಂದಿಗೂ ಕ್ಷಯವಾಗುವುದಿಲ್ಲ. ದಾನ ಹೃದಯವೂ ಎಂದಿಗೂ ಒಣಗುವುದಿಲ್ಲ, ಆದ್ದರಿಂದ ನಿಮ್ಮ ಪತ್ನಿಯನ್ನು ನನಗೆ ದಾನವಾಗಿ ನೀಡಿ ಎಂದನು.
ಅದನ್ನು ಆಲಿಸಿದ ವೆಸ್ಸಂತರರಿಗೆ ದಾನದ ಅವಕಾಶ ಬಂತೆಂದು ಆನಂದಿಸಿದರು. ತಕ್ಷಣವೇ ಅವರು "ಓ ಬ್ರಾಹ್ಮಣ, ನೀನು ಕೇಳಿದ್ದನ್ನು ನಿನಗೆ ನೀಡುತ್ತಿದ್ದೇನೆ, ನಾನು ವಿಚಲಿತನಾಗುವುದಿಲ್ಲ" ಎಂದು ಹೇಳಿ ಕಮಂಡಲದಿಂದ ನೀರನ್ನು ತೆಗೆದುಕೊಂಡು ಬ್ರಾಹ್ಮಣನಿಗೆ ನೀರು ಹಾಕಿ ಭಾರ್ಯೆ ದಾನ ಮಾಡಿಯೇ ಬಿಟ್ಟರು.
ಆ ಸಮಯದಲ್ಲಿ ಭೂಮಿಯೇ ಕಂಪಿಸಿಬಿಟ್ಟಿತು. ಇದನ್ನು ಕೇಳಿದ ಮಾದ್ರಿ ದೇವಿಗೆ ಆಶ್ಚರ್ಯವಾಗಲಿಲ್ಲ, ಆಕೆ ವಿರೋಧಿಸಲಿಲ್ಲ, ಆಕೆಯು ಅಳಲೂ ಇಲ್ಲ. ಆಕೆಯು ಹೀಗೆ ಯೋಚಿಸಿದಳೂ: "ನಾನು ವೆಸ್ಸಂತರರ ಪತ್ನಿ. ಅವರು ನನ್ನ ಸ್ವಾಮಿ, ಒಡೆಯರಾಗಿದ್ದಾರೆ, ಅವರು ನನ್ನ ಪಾಲಿನ ಈಶ್ವರರಾಗಿದ್ದಾರೆ. ಅವರು ತಮ್ಮ ಇಚ್ಛೆಯಂತೆ ನನಗೆ ಯಾರಿಗೆ ಬೇಕಾದರೂ ದಾನ ನೀಡಲಿ, ಅವರಿಗೆ ಆ ಅಧಿಕಾರವಿದೆ. ಬೇಕಾದರೆ ನನ್ನನ್ನು ಮಾರಲಿ ಅಥವಾ ಕೊಂದೇಬಿಡಲಿ, ನಾನು ಅವರಿಗೆ ಸೇರಿದವಳು. ಅವರ ಆನಂದವೇ ನನ್ನ ಆನಂದ. ಅವರ ನಿಧರ್ಾರವೇ ನನ್ನ ನಿಧರ್ಾರ "ಎಂದು.
ಬೋಧಿಸತ್ವರು ಹೀಗೆ ಯೋಚಿಸಿದರು: "ನನ್ನ ಪುತ್ರ ಜಾಲಿ ಮತ್ತು ಕುಮಾರಿ ಕೃಷ್ಣಜಿನ ಮತ್ತು ನನ್ನ ಪತ್ನಿ ಮಾದ್ರಿಯರೊಂದಿಗೆ ನನಗೆ ಲವಲೇಶವೂ ಬೇಸರವಾಗಲಿ, ಅಸಹ್ಯವಾಗಲಿ, ದ್ವೇಷವಾಗಲಿ ಇಲ್ಲ. ಆದರೆ ನನಗೆ ಇದೆಲ್ಲಕ್ಕಿಂತಲೂ ಬುದ್ಧತ್ವವು ಪ್ರಿಯವಾದದ್ದು. ಆ ಸರ್ವಜ್ಞತೆಗಾಗಿ ನಾನು ಇವರೆಲ್ಲರ ತ್ಯಾಗಕ್ಕೂ ಚಿಂತಿಸುವುದಿಲ್ಲ".
ಆಗ ದೇವೇಂದ್ರನು ತನ್ನ ನಿಜರೂಪ ತೋರಿಸಿ ಇಬ್ಬರಿಗೂ ಅಭಿನಂದನೆ ಮಾಡಿದನು. ಓ ವೆಸ್ಸಂತರ ಮತ್ತು ಮಾದ್ರಿದೇವಿ, ನೀವು ಇಬ್ಬರೂ ಸಮಾನಮನಸ್ಕರು, ಸಮಾನಚಿತ್ತದವರೂ, ಸಮಾನ ದಾನಪ್ರಜ್ಞೆಯುಳ್ಳವರು, ಸಮಾನ ಶೀಲ ಸದ್ಗುಣಗಳಿಂದ ಕೂಡಿರುವಿರಿ. ನೀವು ಹೀಗೆ ದಾನ ಮಾಡುತ್ತ ಪುಣ್ಯವನ್ನು ಗಳಿಸುತ್ತ ಸುಖಿಯಾಗಿರಿ ಎಂದು ಅವರಿಗೆ ಎಂಟು ವರಗಳನ್ನು ನೀಡುತ್ತಾನೆ.
ಅಲ್ಲಿ ಆ ಮಕ್ಕಳನ್ನು ಸಂಜಯಕುಮಾರರು ಆ ಬ್ರಾಹ್ಮಣನಿಗೆ ಹೇರಳವಾದ ಹಣ, ಐಶ್ವರ್ಯ ನೀಡಿ ಆ ಮಕ್ಕಳನ್ನು ಕೊಂಡುಕೊಳ್ಳುತ್ತಾರೆ. ಆತನು ಮೊಮ್ಮಕ್ಕಳನ್ನು ಮುದ್ದಾಡುತ್ತ ಆತ (ವೆಸ್ಸಂತರ) ಇಂತಹ ಮಕ್ಕಳನ್ನು ಹೇಗೆ ದಾನ ಮಾಡಬಲ್ಲ? ಎಂದು ಕೋಪಿಸಿಕೊಂಡಾಗ ಮೊಮ್ಮಗನಾದ ಜಾಲಿಯು ಹೀಗೆ ಹೇಳಿದನು: ಓ ಪಿತಾಮಹಾ, ಯಾರ ಬಳಿಯಲ್ಲಿ ದಾಸರಿಲ್ಲವೋ, ಪ್ರಾಣಿಗಳು ಇಲ್ಲವೋ, ರಥವಿಲ್ಲವೋ, ಹಣವಿಲ್ಲವೋ ಅಂತಹವರು ಏನುತಾನೆ ದಾನ ನೀಡಬಲ್ಲರು? ಎಂದು ತಂದೆಗೆ ತಕ್ಕ ಮಗನಾಗಿ ಘೋಷಿಸಿದನು.
ರಾಜನಿಗೆ ಪಶ್ಚಾತ್ತಾಪವಾಗಿ, ಇತ್ತ ಪ್ರಜೆಗಳಿಗೂ ಪಶ್ಚಾತ್ತಾಪವಾಗಿತ್ತು. ಅವರೆಲ್ಲರೂ ಸೇರಿ ವೆಸ್ಸಂತರರನ್ನು ಭೇಟಿಮಾಡಲು ವೆಂಕ ಪರ್ವತದ ಬಳಿಗೆ ಹೋದರು. ಎಲ್ಲವೂ ಸುಖಾಂತವಾಗಿ ಒಟ್ಟಿಗೆ ಸೇರುತ್ತಾರೆ. ವೆಸ್ಸಂತರರು ಮರಳಿ ರಾಜನಾಗುತ್ತಾರೆ. ನಂತರವೂ ದಾನ ನೀಡುತ್ತಲೇ ಎಲ್ಲರೂ ಸುಖವಾಗಿ ಜೀವಿಸಿದರು.
(ಈ ಕಥೆಯನ್ನು ಮೂಲ ಪಾಳಿಯಲ್ಲಿ ಅಥವಾ ಅದರ ಯತಾರ್ಥ ಅನುವಾದದಲ್ಲಿ ಓದಿದಿರೆ ಅತ್ಯಂತ ರಸವತ್ತಾಗಿರುತ್ತದೆ. ಏಕೆಂದರೆ ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ).
ವೆಸ್ಸಂತರರು ಈ ಜನ್ಮದ ನಂತರ ದೇವಲೋಕದಲ್ಲಿ ಜನಿಸಿ ಮರುಹುಟ್ಟಿನಲ್ಲಿಯೇ ಗೌತಮ ಬುದ್ಧರಾಗುತ್ತಾರೆ.
