Monday, 16 December 2019

ಬೋಧಿಸತ್ತ ಸಿವಿ (ಶಿಬಿ)

ಬೋಧಿಸತ್ತ ಸಿವಿ (ಶಿಬಿ)


ಒಮ್ಮೆ ಭಿಕ್ಷುಗಳು ಕೋಸಲ ನರೇಶ ಪಸೇನದಿಯನ್ನು ಕುರಿತು, ಆತನ ದಾನ ಗುಣಗಳನ್ನು ಪ್ರಶಂಸಿಸುತ್ತಿದ್ದರು. ಆಗ ಭಗವಾನರು ಭಿಕ್ಷುಗಳೇ, ಬಾಹ್ಯ ವಸ್ತುಗಳ ದಾನ ಮಾಡುವುದು ಸುಲಭ. ಹಿಂದೆ ಸಹಾ ಪಂಡಿತರು ಪ್ರತಿನಿತ್ಯ ಆರೇಳು ಸಾವಿರ ದಾನ ಮಾಡುತ್ತಿದ್ದರು. ಆದರೂ ಅದರಿಂದಾಗಿ ಸಂತುಷ್ಟರಾಗದೆ ತಮ್ಮ ದೇಹದ ಅಂಗವನ್ನೇ ದಾನವಾಗಿ ನೀಡಿದರು.
ಭಿಕ್ಷುಗಳು ಅದನ್ನು ವಿವರಿಸುವಂತೆ ಕೇಳಿಕೊಂಡಾಗ ಭಗವಾನರು ತಾವು ಹಿಂದೆ ಸಿವಿ ಬೋಧಿಸತ್ತರಾಗಿದ್ದಾಗಿನ ಘಟನೆಯನ್ನು ತಿಳಿಸಿದರು.
ಬಹುಕಾಲದ ಹಿಂದೆ ಶಿಬಿ ರಾಷ್ಟ್ರವನ್ನು ಸಿವಿ ಮಹಾರಾಜನು ಆಳುತ್ತಿದ್ದನು. ಆತನ ಪುತ್ರನೇ ಸಿವಿಕುಮಾರ (ಬೋಧಿಸತ್ತ). ಮುಂದೆ ಸಿವಿಕುಮಾರರೇ ರಾಜರಾದರು. ಅವರು ಅತ್ಯಂತ ದಾನ ಹೃದಯಿಗಳಾಗಿದ್ದರು. ಪ್ರತಿನಿತ್ಯವೂ ಸಾವಿರಗಟ್ಟಲೇ ದಾನವನ್ನು ಮಾಡುತ್ತಿದ್ದರು. ನಾನಾರೀತಿಯ ಆಹಾರ, ಪಾನೀಯ, ವಸ್ತ್ರಗಳು, ವಾಹನಗಳು, ವಸತಿಗಳು, ವಸ್ತುಗಳು ಹಾಗೆಯೇ ಸರ್ವರೀತಿಯ ದಾನವನ್ನು ಪ್ರತಿನಿತ್ಯ ಮಾಡುತ್ತಿದ್ದರು. ಪ್ರಜೆಗಳನ್ನು ಮಕ್ಕಳಂತೆ ಭಾವಿಸಿ, ಪ್ರಜೆಗಳಿಗೆ ಸ್ವಲ್ಪವೂ ತೊಂದರೆಯಾಗದಂತೆ, ಸದಾ ಸುಖಿಯಾಗಿರುವಂತೆ ನಾನಾ ಸವಲತ್ತುಗಳನ್ನು ಮಾಡಿದರು. ಹೀಗೆ ನಾನಾ ದಾನಗಳನ್ನು ಮಾಡಿದರೂ ಸಹಾ ಅವರಿಗೆ ಅದು ತೃಪ್ತಿತರಲಿಲ್ಲ. ಇದಕ್ಕಿಂತ ಶ್ರೇಷ್ಠವಾದುದನ್ನೇ ದಾನ ನೀಡಬೇಕೆಂದು ಚಿಂತಿಸುತ್ತಿದ್ದಾಗ ಅವರ ಮನಸ್ಸಿನಲ್ಲಿ ದಾನ ಹೃದಯವು ವಿಕಸಿತವಾಗಿ ಹೀಗೆ ಮನಸ್ಸಿನಲ್ಲಿ ದಾನಸಂಕಲ್ಪಗಳನ್ನು ಮಾಡತೊಡಗಿದರು.
ನಾನು ದಾನ ಮಾಡದೆ ಇರುವಂತಹ ಬಾಹ್ಯವಸ್ತುವೇ ಇಲ್ಲವಾಗಿದೆ. ಈಗ ನಾನು ನನ್ನಲ್ಲಿನ ಯಾವುದನ್ನಾದರೂ ದಾನ ಮಾಡಬೇಕಾಗಿದೆ. ಯಾರಾದರೂ ಅತಿಥಿಗಳು ನನ್ನ ದೇಹದ ಮಾಂಸವನ್ನಾಗಲಿ, ನನ್ನ ರಕ್ತವಾಗಲಿ, ನನ್ನ ಕಣ್ಣುಗಳಾಗಲಿ ಅಥವಾ ನನ್ನ ಹೃದಯವಾಗಲಿ ಕೇಳಿದರೆ ನಾನು ಲವಲೇಶವೂ ಕಂಪಿಸದೆ ಅವನ್ನೆಲ್ಲಾ ಕತ್ತರಿಸಿ ಅಥವಾ ಕಿತ್ತು ದಾನ ಮಾಡಿಬಿಡುವೆ.
ಅವರ ಈ ಶುದ್ಧ ಸಂಕಲ್ಪವು ದಶದಿಕ್ಕುಗಳಿಗೂ ಪ್ರಸರಿಸಿತು, ದೇವೇಂದ್ರ ಸಕ್ಕನಿಗೂ ಇದು ಕೇಳಿಸಿತು. ಇದನ್ನು ಪರೀಕ್ಷಿಸಬೇಕೆಂದು ಕುರುಡ ವೃದ್ಧ ಬ್ರಾಹ್ಮಣನಾಗಿ ವೇಷ ಧರಿಸಿಕೊಂಡು, ರಾಜನ ದಾನ ಭವನಕ್ಕೆ ಬಂದನು. ನಂತರ ಹೀಗೆ ಹೇಳಿದನು:
ಮಹಾಪ್ರಭು ನಿಮ್ಮ ದಾನ ಖ್ಯಾತಿಯನ್ನು ಆಲಿಸಿ ಬಹುದೂರದಿಂದ ಬಂದಿರುವೆನು. ನನಗೆ ಎರಡು ಕಣ್ಣಿಲ್ಲ. ನೀವೇನಾದರೂ ಒಂದು ಕಣ್ಣನ್ನು ನನಗೆ ದಾನವಾಗಿ ನೀಡಿದರೆ, ನಾವಿಬ್ಬರೂ ಏಕನೇತ್ರರಾಗುತ್ತೇವೆ.
ಇದನ್ನು ಆಲಿಸುತ್ತಲೇ ಬೋಧಿಸತ್ವರು ಆನಂದಭರಿತರಾದರು. ತಮ್ಮ ಸಂಕಲ್ಪವು ಇಂದು ಸಿದ್ಧಿಸುವುದೆಂದು ಹಿಗ್ಗಿ ಅವರು ಆ ಬ್ರಾಹ್ಮಣನಿಗೆ ಹೀಗೆ ಹೇಳಿದರು: ಓ ಬ್ರಾಹ್ಮಣ, ನೀನು ಒಂದು ಕಣ್ಣನ್ನು ಕೇಳುತ್ತಿದ್ದೀಯೇ, ಆದರೆ ನಾನು ಎರಡು ಕಣ್ಣನ್ನು ದಾನವಾಗಿ ನೀಡುತ್ತೇನೆ, ಸ್ವೀಕರಿಸು ಎಂದು ಹೇಳಿ ರಾಜನು ಸೀವಕನೆಂಬ ಪ್ರಖ್ಯಾತ ಶಸ್ತ್ರಚಿಕಿತ್ಸಕನನ್ನು ಕರೆಸಿದನು. ಆತನಿಗೆ ತನ್ನ ಅಭಿಪ್ರಾಯವನ್ನು ತಿಳಿಸಿದನು. ಅದನ್ನು ಆಲಿಸಿದ ವೈದ್ಯ, ರಾಣಿ, ಅಂತಃಪುರವು, ನಾಗರೀಕರು ಗಾಬರಿಗೊಂಡರು. ಹಾಗೆ ಮಾಡಬೇಡಿ ಎಂದು ಗೋಳಾಡಿ ಪ್ರಲಾಪಿಸಿದರು. ಓ ಪ್ರಭು, ಅದರ ಬದಲು ಮುತ್ತುರತ್ನ, ವಜ್ರ ವೈಢೂರ್ಯವನ್ನು ಬೇಕಾದರೆ ನೀಡಿರಿ. ಆದರೆ ಚಕ್ಷು ಅಮೂಲ್ಯವಾದುದು, ನೀಡದಿರಿ ಎಂದರು.
ಅದಕ್ಕೆ ಬೋಧಿಸತ್ವರು ಹೀಗೆ ಉತ್ತರಿಸಿದರು: ದಾನ ನೀಡುವೆ ಎಂದು ನಂತರ ನಿರಾಕರಿಸಿದರೆ, ಮಿಥ್ಯಾವಾದಿಯಾಗುವೆನು, ಪಾಪಿಯಾಗುವೆನು, ಕೇಳಿದ್ದನ್ನು ನೀಡಬೇಕು ಹೊರತು ಕೇಳದುದನ್ನು ನೀಡಬಾರದು. ಆದ್ದರಿಂದ ನಾನು ನೇತ್ರಗಳನ್ನು ನೀಡಿಯೇ ತೀರುತ್ತೇನೆ ಎಂದರು.
ಇದನ್ನು ಆಲಿಸಿದ ಅಮಾತ್ಯರು ಏತಕ್ಕಾಗಿ, ಯಾವ ಪುರುಷಾರ್ಥಕ್ಕಾಗಿ ಹೀಗೆ ನೇತ್ರದಾನ ನೀಡುತ್ತಿರುವಿರಿ ಎಂದು ಪ್ರಶ್ನಿಸಿದರು.
ಅದಕ್ಕೆ ಬೋಧಿಸತ್ವರು ಹೀಗೆ ಉತ್ತರಿಸಿದರು:
ನಾನು ಯಾವುದೇ ಪ್ರಾಪಂಚಿಕ
ಯಶಸ್ಸಿಗಾಗಲಿ, ಪುತ್ರಿಚ್ಛೆಗಾಗಲಿ,
ಧನ ಅಥವಾ ರಾಷ್ಟ್ರಾಪೇಕ್ಷೆಗಾಗಲಿ, ನೀಡುತ್ತಿಲ್ಲ.
ನನಗೆ ದಾನದಲ್ಲೇ ಆನಂದವಿರುವುದರಿಂದ ದಾನ ನೀಡುತ್ತಿರುವೆ.
ನನ್ನ ನೇತ್ರಗಳ ಬಗ್ಗೆ ನನಗೆ ದ್ವೇಷವಿಲ್ಲ,
ಅವು ನನಗೆ ಅಪ್ರಿಯವೂ ಅಲ್ಲ. ನನಗೆ
ಸಬ್ಬಞ್ಞತೆ (ಸಮ್ಮಾಸಂಭೋದಿ)ಯು
ಪರಮ ಪ್ರಿಯವಾಗಿದೆ, ಅದಕ್ಕಾಗಿ ನಾನು
ಕಣ್ಣುಗಳೇ ಅಲ್ಲ, ಏನನ್ನಾದರೂ ದಾನ ಮಾಡಲು
ನಾನು ಸಿದ್ಧನಾಗಿದ್ದೇನೆ ಎಂದರು.
ನಂತರ ಬ್ರಾಹ್ಮಣನಿಗೆ ಚಕ್ಷುಗಳನ್ನು ತನ್ನಿಂದ ತೆಗೆದು ಜೋಡಿಸುವಂತೆ ವೈದ್ಯನಾದ ಸೇವಕನಿಗೆ ಆಜ್ಞಾಪಿಸಿದನು.
ಪ್ರಭು, ಚಕ್ಷುದಾನ ಅತ್ಯಂತ ಗಂಭೀರಕರ ವಿಷಯ. ತಾವು ಮತ್ತೊಂದುಬಾರಿ ಯೋಚಿಸಿ ನಿರ್ಧರಿಸಿದರೆ ಉತ್ತಮ ಎಂದು ವೈದ್ಯನು ಹೇಳಿದಾಗ,
ನನ್ನ ನಿಧರ್ಾರ ಸ್ಥಿರವಾಗಿದೆ, ತಡಬೇಡ ಆರಂಭಿಸು ಎಂದು ಸಿವಿ ಬೋಧಿಸತ್ವರು ನುಡಿದರು.
ವೈದ್ಯನು ತನ್ನ ಕಾರ್ಯ ಆರಂಭಿಸಿದನು. ಕೆಲವು ಹಂತದ ಶಸ್ತ್ರಚಿಕಿತ್ಸೆಯ ನಂತರ ಮಹಾಪ್ರಭು ಮತ್ತೆ ಮೊದಲಿನಂತೆ ಮಾಡುವೆನು, ನಿಧರ್ಾರ ಬದಲಿಸುವಿರಾ? ಎಂದು ಕೇಳಿಕೊಂಡನು.
ಬೇಡ, ಮುಂದುವರೆಸು. ನನಗೆ ಈ ಕಣ್ಣಿಗಿಂತಲೂ ಸಾವಿರಪಟ್ಟು ಲಕ್ಷಪಟ್ಟು ಬುದ್ಧತ್ವದ ಚಕ್ಷುವೇ ಪ್ರಿಯವಾದುದು. ಈ ನೇತ್ರದಾನದಿಂದಾಗಿ ನನಗೆ ಸಮ್ಮಾಸಂಬೋಧಿಯನ್ನು ಪ್ರಾಪ್ತಿಮಾಡುವ ಚಕ್ಷು ಸಿಗುವಂತಾಗಲಿ ಎಂದು ಬೋಧಿಸತ್ವರು ಮರುನುಡಿದರು. ವೈದ್ಯರು ಅದರಂತೆಯೇ ಮಾಡಿದರು.
ಚಕ್ಷುಗಳನ್ನು ಪಡೆದ ನಂತರ ಆ ಬ್ರಾಹ್ಮಣನು ನಗರದಿಂದ ಹೊರಟುಹೋದನು. ಹೀಗೆ ಬೋಧಿಸತ್ವರು ಆ ಜನ್ಮದಲ್ಲಿ ಅಭಯ ದಾನವನ್ನು ಮಾಡಿದರು.

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....