ಬೋಧಿಸತ್ವ ಬ್ರಹ್ಮದತ್ತ ಕುಮಾರರ ಅಭಯ ದಾನ
ಬಹುಕಾಲದ ಹಿಂದೆ ಬೋಧಿಸತ್ವರು ವಾರಣಾಸಿಯ ಪಟ್ಟದ ರಾಣಿಯಲ್ಲಿ ಜನಿಸಿ ಬಹ್ಮದತ್ತಕುಮಾರ ಎಂದು ಹೆಸರನ್ನು ಪಡೆದರು. ಅವರು ಮುಂದೆ ಯುವರಾಜರಾದರು. ಆ ಕಾಲದಲ್ಲೂ ಸಹಾ ದೇವರಿಗೆ ಹರಕೆ ಹೊತ್ತು ಅಥವಾ ದೇವತೆಗಳಿಗೆ ಪ್ರಸನ್ನರಾಗಿಸಲು ಪ್ರಾಣಿ ಬಲಿಗಳನ್ನು ನೀಡುತ್ತಿದ್ದರು. ಸಾವಿರಗಟ್ಟಲೇ ಪ್ರಾಣಿಗಳನ್ನು ಬಲಿ ನೀಡುತ್ತಿದ್ದರು. ಇದನ್ನು ಕಂಡ ಬೋಧಿಸತ್ವರು ಹೀಗೆ ಸಂಕಲ್ಪಿಸಿದರು: ಈ ಜನರು ಮೌಢ್ಯದಿಂದಾಗಿ ಮುಗ್ಧ ಪ್ರಾಣಿಗಳನ್ನು ಬಲಿ ನೀಡುತ್ತಿದ್ದಾರೆ. ನಾನು ಉಪಾಯದಿಂದಾಗಿ ಈ ಪ್ರಾಣಿ ಬಲಿಯನ್ನು ಮುಂದೆ ತಡೆಗಟ್ಟುತ್ತೇನೆ.
ಅದಕ್ಕಾಗಿ ಅವರು ಉಪಾಯವನ್ನು ಮಾಡಿದರು. ಅದೇನೆಂದರೆ, ವಟವೃಕ್ಷವೊಂದಕ್ಕೆ ಪ್ರತಿದಿನ ಪೂಜಿಸಿ ಬರುತ್ತಿದ್ದರು. ಕಾಲನಂತರ ಅವರ ತಂದೆಯವರು ಮೃತರಾಗಿರುವುದನ್ನು ಕಂಡು, ಅವರನ್ನೇ ಮಹಾರಾಜನನ್ನಾಗಿ ಮಾಡಿದರು. ಆಗ ಬೋಧಿಸತ್ವರು ಪ್ರಜೆಗಳನ್ನು ಉದ್ದೇಶಿಸಿ ಹೀಗೆ ಭಾಷಣ ಮಾಡಿದರು ಪ್ರಿಯ ಪ್ರಜೆಗಳೇ, ನನಗೆ ರಾಜ್ಯ ದೊರೆತಿರುವುದು ಈ ವಟವೃಕ್ಷದಲ್ಲಿರುವ ದೇವತೆಯ ಪ್ರಭಾವದಿಂದಲೇ ಆಗಿದೆ. ನಾನು ರಾಜನಾದರೆ ಬಲಿಕೊಡುವೆ ಎಂದು ಹರಕೆ ಹೊತ್ತಿದ್ದೇನೆ, ಅದನ್ನು ನೆರವೇರಿಸಲು ಸಿದ್ಧತೆಗಳನ್ನು ಪ್ರಾರಂಭಿಸಿರಿ.
ಆಯಿತು ಪ್ರಭು, ಯಾವ ಪ್ರಾಣಿಗಳ ಆಯ್ಕೆ ನಿಮ್ಮದಾಗಿದೆ?
ಮಾನವರು.
ಏನು ಮಾನವರೇ?
ಹೌದು, ಯಾರು ಜೀವಹತ್ಯೆ ಮಾಡುವರೋ, ಕಳ್ಳತನ ಮಾಡುವರೋ, ವ್ಯಭಿಚಾರ ತಲ್ಲೀನರೋ, ಸುಳ್ಳುಗಾರರೋ, ಚಾಡಿಕೋರರೋ, ನಿಂದನೆಗಾರರೋ, ಹರಟೆಗಾರರೋ, ದುರಾಸೆ ಪೀಡಿತರೋ, ದ್ವೇಷಿಗಳೋ ಮತ್ತು ಮೂಢನಂಬಿಕೆಯವರೋ ಅಂತಹವನ್ನು ಸಾವಿರ ಸಂಖ್ಯೆಯು ತುಂಬಿದ ದಿನವೇ ದೇವತೆಗೆ ಬಲಿಯನ್ನು ಅಪರ್ಿಸೋಣ. ಇದನ್ನು ಡಂಗೂರ ಸಾರಿಸಿ ಎಂದು ಆಜ್ಞಾಪಿಸಿದರು.
ಇದನ್ನು ಆಲಿಸಿದ ಜನರು ಪ್ರಾಣ ಭಯದಿಂದಾಗಿ ಆ ದಶಪಾಪ ಕರ್ಮಗಳನ್ನು ಮಾಡುವುದನ್ನೇ ಬಿಟ್ಟುಬಿಟ್ಟರು. ಇದರಿಂದಾಗಿ ಪಾಪಕರ್ಮಗಳು ತಡೆಯಲ್ಪಟ್ಟವು. ಅಪಾರ ಜೀವಿಗಳು ರಕ್ಷಿಸಲ್ಪಟ್ಟವು.

No comments:
Post a Comment