ಬೋಧಿಸತ್ವ ಮಹಾಔಷಧಕುಮಾರ
ಬಹುಕಾಲದ ಹಿಂದೆ ಮಿಥಿಲಾನಗರದಲ್ಲಿ ಶ್ರೀವರ್ಧ ಮತ್ತು ಸುಮನ ದೇವಿಯವರಿಗೆ ಪುತ್ರರತ್ನವೊಂದು ಜನಿಸಿತು. ಆ ಮಗುವೇ ಬೋಧಿಸತ್ವ ಮಹಾಔಷಧಕುಮಾರ. ಈ ಬೋಧಿಸತ್ತ ಜನಿಸುವಾಗಲು ಸಹಾ ತಾಯಿಗೆ ಸ್ವಲ್ಪವೂ ನೋವು ಉಂಟಾಗಲಿಲ್ಲ. ಬೋಧಿಸತ್ವ ಹುಟ್ಟುವಾಗ ದೇವೇಂದ್ರ ಸಕ್ಕನು ಸಹಾ ಅಲ್ಲಿಗೆ ಬಂದುಬಿಟ್ಟಿದ್ದನು. ಆತನು ಆ ಮಗುವಿನ ಅಂಗೈಯಲ್ಲಿ ಮೂಲಿಕೆಯನ್ನಿಟ್ಟು ಅದೃಶ್ಯನಾದನು. ಆದರೆ ಅಲ್ಲಿನ ಜನರಿಗೆ ಮೂಲಿಕೆ ಸಹಿತವೇ ಜನ್ಮಿಸಿದ್ದಾನೆ ಎಂದು ಭಾವಿಸಿದರು. ತಾಯಿಯು ಮಗುವಿಗೆ ಕಂದ ಕೈಯಲ್ಲಿ ಏನಿದೆ? ಎಂದು ಸುಮ್ಮನೆ ಪ್ರಶ್ನಿಸಿದಾಗ ಅಮ್ಮ ನಾನು ಔಷಧಿ ತಂದಿದ್ದೇನೆ, ಇದರಿಂದ ಎಲ್ಲಾ ರೋಗಗಳು ವಾಸಿಯಾಗುತ್ತದೆ ಎಂದಿತು. ಆಕೆ ಪತಿಗೆ ವಿಷಯ ತಿಳಿಸಿದಳು. ಅತನಿಗೆ ಏಳು ವರ್ಷದಿಂದ ತಲೆನೋವು ಇತ್ತು. ಮೂಲಿಕೆಯನ್ನು ಕಲ್ಲಿನ ಮೇಲೆ ತೇಯ್ದು ಹಣೆಗೆ ಸ್ವಲ್ಪ ಹಚ್ಚುತ್ತಲೇ ತಲೆನೋವು ಮಾಯವಾಗಿತ್ತು.ಎಲ್ಲೆಡೆ ಈ ವಿಚಿತ್ರ ಸುದ್ದಿ ಹಬ್ಬಿತು. ಮೂಲಿಕೆಯೊಂದಿಗೆ ಜನಿಸಿದ್ದಾನೆ, ಅದರಿಂದ ಸರ್ವರೋಗಗಳು ವಾಸಿಯಾಗುತ್ತವೆ. ಆ ಮಗುವು ಹುಟ್ಟುತ್ತಲೇ ಮಾತನಾಡಬಲ್ಲನು. ಆ ಮೂಲಿಕೆ ಇರುವವರೆಗೂ ಅದು ರೋಗವುಳ್ಳ ಸರ್ವರಿಗೂ ಕಾಯಿಲೆಯಿಂದ ಮುಕ್ತಿ ದೊರೆಯಿತು. ಆದ್ದರಿಂದಲೇ ಆ ಮಗುವಿಗೆ ಮಹಾಔಷಧಕುಮಾರ ಎಂದು ಹೆಸರಿಡಲಾಯಿತು.
ಬೋಧಿಸತ್ವರು ಮೂರು ಜನ್ಮದಲ್ಲಿ ಮಾತ್ರ ಹುಟ್ಟುತ್ತಲೇ ಮಾತನಾಡಿದ್ದಾರೆ. ಮಹಾಔಷಧಕುಮಾರನಾಗಿರುವಾಗ, ವೆಸ್ಸಂತರರಾಗಿದ್ದಾಗ ಮತ್ತು ಸಿದ್ಧಾರ್ಥನಾಗಿ ಕೊನೆಯ ಜನ್ಮದಲ್ಲಿ ಹುಟ್ಟುತ್ತಲೇ ಮಾತನಾಡಿದ್ದಾರೆ.

No comments:
Post a Comment