ವಿಸಯ್ಹ ಬೋಧಿಸತ್ವ
ಬಹುಕಾಲದ ಹಿಂದೆ ಬೋಧಿಸತ್ವರು ವಾರಣಾಸಿಯಲ್ಲಿ ವಿಸಯ್ಹ ಶ್ರೇಷ್ಠಿಯಾಗಿ 80 ಕೋಟಿ ಐಶ್ವರ್ಯಕ್ಕೆ ಒಡೆಯರಾಗಿದ್ದರು. ಅವರು ಪ್ರತಿದಿನ ಆರು ಲಕ್ಷ ಮೌಲ್ಯದ ದಾನ ಮಾಡುತ್ತಿದ್ದರು. ಇದರಿಂದಾಗಿ ಸಮಸ್ತ ಜಂಬೂದ್ವೀಪದಲ್ಲೇ ಪ್ರಸಿದ್ಧಿಯನ್ನು ಪಡೆದರು.ಇದರ ಪರಿಣಾಮವಾಗಿ ಇಂದ್ರನಿಗೆ ಭಯವುಂಟಾಯಿತು. ಏಕೆಂದರೆ ಈ ರೀತಿಯ ದಾನ ಮಾಡಿದವರು ಸಕ್ಕನ ಸ್ಥಾನವನ್ನು ಹೊಂದಬಹುದಾಗಿತ್ತು. ಅದಕ್ಕಾಗಿ ಸಕ್ಕನು ಬೋಧಿಸತ್ವನ ಸಮಸ್ತ ಐಶ್ವರ್ಯವನ್ನೆಲ್ಲಾ ಅಂತದರ್ಾನ ಮಾಡಿಬಿಟ್ಟನು. ಉಟ್ಟ ಬಟ್ಟೆಯ ವಿನಃ ಅವರಲ್ಲಿ ಅರ್ಧ ಕಾಸೂ ಸಹಾ ದೊರೆಯಲಿಲ್ಲ.
ಪರಿಸ್ಥಿತಿ ಹೀಗಿದ್ದರೂ ಸಹಾ ಬೋಧಿಸತ್ವರ ದಾನದ ಉತ್ಸಾಹ ಮಾತ್ರ ಲವಲೇಶವೂ ತಗ್ಗಲಿಲ್ಲ. ಅವರು ಹುಲ್ಲು ಕೊಯ್ದು ಅದನ್ನು ಮಾರಿ ದಾನ ಮಾಡಲು ನಿರ್ಧರಿಸಿದರು. ಹಾಗೆಯೇ ಮಾಡಿ ಬಂದ ಲಾಭದಲ್ಲಿ ಅರ್ಧಭಾಗ ದಾನಕ್ಕೆಂದು ನಿರ್ಧರಿಸಿದರು. ಯಾಚಕರು ಹೆಚ್ಚಾಗಿದ್ದರಿಂದಾಗಿ ಎಲ್ಲಾ ದಾನ ಮಾಡಿ ವಿಸಯ್ಹ ಮತ್ತು ಅವರ ಪತ್ನಿಯು ಉಪವಾಸದಿಂದ ಮಲಗಿದರು. ಇದೇಬಗೆಯಲ್ಲಿ ಏಳು ದಿನಗಳು ಕಳೆದಾಗ, ಆ ದಿನ ಆತನು ನಿತ್ರಾಣದಿಂದಾಗಿ ಕಣ್ಣು ತಿರುಗಿ ಬಿದ್ದುಬಿಡುತ್ತಾನೆ. ಆಗ ಶಕ್ರನು ಪ್ರತ್ಯಕ್ಷನಾಗಿ ಹೀಗೆ ನುಡಿಯುತ್ತಾನೆ: ಓ ವಿಸಯ್ಹ, ಬಹುಕಾಲದಿಂದಲೂ ದಾನ ನೀಡುತ್ತಿರುವೆ. ಇದರಿಂದಲೇ ನಿನ್ನ ಐಶ್ವರ್ಯ ಪೂರ್ಣವಾಗಿ ಕ್ಷಯವಾಗಿದೆ. ಆದ್ದರಿಂದ ದಾನದಲ್ಲಿ ನಿಯಂತ್ರಣವುಳ್ಳವನಾಗು, ಆಗ ನಿನಗೆ ನಿನ್ನ ಐಶ್ವರ್ಯವನ್ನೆಲ್ಲಾ ಮರಳಿ ಸಿಗುವುದು.
ಆಗ ಬೋಧಿಸತ್ವ ನೀವು ಯಾರು ಎಂದು ಕೇಳುತ್ತಾರೆ. ನಾನು ಇಂದ್ರ ಎಂದು ಆತನು ಉತ್ತರಿಸಿದಾಗ, ಬೋಧಿಸತ್ವರು ಹೀಗೆ ಉತ್ತರಿಸುತ್ತಾರೆ. ಓ ಇಂದ್ರ, ನೀನು ಸ್ವತಃ ದಾನ, ಶೀಲ ಮತ್ತು ಉಪೋಸತದಿಂದಲೇ ಈ ಪದವಿ ಪಡೆದಿರುವಿರಿ. ನನಗೆ ದಾನ ಮಾಡಬೇಡೆಂದು ಅಕಾರ್ಯವನ್ನು ಏಕೆ ಎಸಗುತ್ತಿರುವಿರಿ? ಇದು ಸರಿಯಲ್ಲ, ಧನಕ್ಕಾಗಿ ದಾನವನ್ನು ನಾನು ತೊರೆಯಲಾರೆ. ಬೇಕಾದರೆ ದಾನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವೆ. ನಿರ್ಗತಿಕ ಸ್ಥಿತಿಯಲ್ಲೂ ಕೈಲಾದಷ್ಟು ದಾನವನ್ನು ನಾನು ಮಾಡಿಯೇ ತೀರುವೆ.
ಓ ವಿಸಯ್ಹ ದಾನವನ್ನು ಏಕೆ ಮಾಡುವೆ? ಶಕ್ರತ್ವದ ಬಯಕೆಯೇ?
ನನ್ನ ದಾನದ ಉದ್ದೇಶ ಶಕ್ರತ್ವವಲ್ಲ, ಬ್ರಹ್ಮತ್ವವೂ ಅಲ್ಲ. ಸಮ್ಮಾಸಂಬೋಧಿಯ ಪ್ರಾಪ್ತಿಗಾಗಿ ನಾನು ದಾನವನ್ನು ಮಾಡುತ್ತೇನೆ.
ಈಗ ಶಕ್ರನಿಗೆ ಭಯ ನಿವಾರಣೆಯಾಗಿ, ಆನಂದಿತನಾಗಿ ಬೋಧಿಸತ್ವನ ಬೆನ್ನನ್ನು ಮುಟ್ಟುವುದೇ ತಡ, ಶರೀರ ಮತ್ತೆ ಆರೋಗ್ಯಯುತವಾಗಿ, ಶಕ್ತಿಯುತವಾಗಿ, ತೇಜಸ್ಸುಭರಿತವಾಯಿತು. ಶಕ್ರನು ವಿಸಯ್ಹರವರ ಐಶ್ವರ್ಯವನ್ನು ಹಿಂತಿರುಗಿಸಿ, ಇನ್ನಷ್ಟು ಪ್ರಮಾಣದ ಐಶ್ವರ್ಯ ಸೇರಿಸಿ, ದಾನಕ್ಕೆ ಪ್ರೋತ್ಸಾಹಿಸಿ ಹೊರಟುಹೋದನು.

No comments:
Post a Comment