ಶತ್ರುವಿಗೂ ಅಭಯದಾನ ನೀಡಿದ ಭೋಧಿಸತ್ವ
ಬಹುಕಾಲದ ಹಿಂದೆ ಬೋಧಿಸತ್ವರು ವಾರಣಾಸಿಯ ಪಕ್ಕದ ಕಾಡಿನಲ್ಲಿ ವಾನರರಾಗಿ ಜನ್ಮ ತಾಳಿ ಅಲ್ಲಿ ವಾಸವಾಗಿದ್ದರು. ಪುಣ್ಯವಂತರಾಗಿದ್ದರಿಂದಾಗಿ ಬೃಹತ್ ಶರೀರವನ್ನು ಹೊಂದಿದ್ದರು. ಹಾಗೆಯೇ ಕೋಮಲ ಹೃದಯಿಯೂ ಆಗಿದ್ದರು. ಜೊತೆಗೆ ಪ್ರಜ್ಞಾವಂತರೂ ಸಹಾ ಆಗಿದ್ದರು.ಒಂದುದಿನ ಕಾಶಿ ಗ್ರಾಮದ ಕೃಷಿಕನೊಬ್ಬನು ತನ್ನ ಕಾಣೆಯಾದ ಎತ್ತುಗಳನ್ನು ಹುಡುಕುತ್ತಾ ಕಾಡಿನಲ್ಲಿ ಪ್ರವೇಶಿಸಿದನು. ಅವು ಸಿಗದೆ, ಇತ್ತ ಹಸಿವಿನಿಂದ ಕಂಗೆಟ್ಟು ಆತನು ತಿಂದುಕವೃಕ್ಷವೇರಿ ಹಣ್ಣುಗಳನ್ನು ತಿನ್ನುತ್ತಿದಾಗ ಕಾಲುಜಾರಿ ಆಳವಾದ ಪ್ರಪಾತಕ್ಕೆ ಬಿದ್ದುಬಿಟ್ಟನು. ಅಲ್ಲಿ ಸ್ವಲ್ಪ ನೀರಿದ್ದರಿಂದಾಗಿ ಆತನ ಜೀವ ಉಳಿಯಿತು. ಆದರೂ ಅಲ್ಲಿಂದ ಹೊರಬರಲಾರದೆ ಅಲ್ಲೇ 10 ದಿನಗಳು ಕಾಲ ಕಳೆದುಬಿಟ್ಟನು. ಆತನು ಅಳುತ್ತಾ ಪ್ರಲಾಪಿಸುತ್ತಿದ್ದನು. ಆತನ ಧ್ವನಿಯು ಬೋಧಿಸತ್ವರಿಗೆ ಕೇಳಿಸಿತು. ಅವರು ಕಲ್ಲುಗಳನ್ನು ಇನ್ನೊಂದು ಬದಿಗೆ ಎಸೆಯುತ್ತ ಮೆಟ್ಟಿಲು ರೀತಿ ಮಾಡಿ ಆ ಕೃಷಿಕನಿಗೆ ಹೊರಬರುವಂತೆ ಸನ್ನೇ ಮಾಡಿದರು. ಆದರೆ ಹತ್ತು ದಿನದಿಂದ ಆಹಾರವಿಲ್ಲದೆ ದುರ್ಬಲವಾಗಿದ್ದ ಆತನಿಗೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಬೋಧಿಸತ್ವರೇ ಸ್ವತಃ ಆ ಪ್ರಪಾತದಲ್ಲಿ ಗಿರಿಗಹ್ವರದಲ್ಲಿ ಇಳಿದರು. ಹಾಗು ಆತನನ್ನು ಬೆನ್ನಮೇಲೆ ಕುಳ್ಳರಿಸಿಕೊಂಡು ಆ ಗಿರಿಗಹ್ವರದಿಂದ ಬಹಳ ಕಷ್ಪಟ್ಟು ಮೇಲಕ್ಕೆ ತಂದರು. ತುಂಬಾ ದಣಿದ್ದುದ್ದರಿಂದಾಗಿ ಅದು ಸ್ವಲ್ಪಕಾಲ ವಿಶ್ರಾಂತಿ ಬಯಸಿತು. ಹಾಗೆಯೇ ಕಣ್ಣುಮುಚ್ಚಿ ಮಲಗಿತು.
ಈಗ ಆ ಕೃಷಿಕನಿಗೆ ಪಾಪಯೋಚನೆಗಳು ಉಂಟಾಯಿತು. ಅದು ಏನೆಂದರೆ ಹಸಿದಿದ್ದ ಆತನಿಗೆ ಈ ಮಹಾಕಪಿಯು ಉತ್ತಮ ಆಹಾರವೆಂದು ಆತನು ಭಾವಿಸಿ, ತನಗಾಗಿ ಜೀವವನ್ನು ಒತ್ತೆಯಿಟ್ಟು ಪ್ರಾಣ ಉಳಿಸಿದ ವಾನರನನ್ನೇ ಕೊಲ್ಲಲು ನಿರ್ಧರಿಸಿದನು. ಅದಕ್ಕಾಗಿ ಆತನು ದೊಡ್ಡ ಕಲ್ಲನ್ನು ಎತ್ತಿ ಮಹಾಕಪಿಯ ತಲೆಯ ಮೇಲೆ ಹಾಕಲು ಪ್ರಯತ್ನಿಸಿದನು. ಆದರೆ ದುರ್ಬಲನಾಗಿದ್ದರಿಂದಾಗಿ ಅದು ಪೂರ್ಣ ತಲೆಗೆ ಬೀಳದೆ ಕೇವಲ ತಲೆಗೆ ದೊಡ್ಡ ಗಾಯವಾಯಿತು, ರಕ್ತ ಹರಿಯತೊಡಗಿತು.
ಎಚ್ಚೆತ್ತ ಮಹಾಕಪಿಗೆ ಆಶ್ಚರ್ಯವಾಯಿತು. ಉಪಕಾರಿಗೆ ಹತ್ಯೆ ಮಾಡಲು ಬಯಸುತ್ತಾನಲ್ಲ ಎಂದು ಯೋಚಿಸಿತು. ಅದಕ್ಕೆ ತಲೆಗೆ ತೀವ್ರ ಪೆಟ್ಟಾಗಿ ನೋವು ಆವರಿಸುತ್ತಿದ್ದರೂ ಸಹಾ ಆ ಕೃಷಿಕನ ಒಳಿತನ್ನೇ ಚಿಂತಿಸಿತು. ಆಗ ಅದು ಆತನಿಗೆ ಹೀಗೆ ಹೇಳಿತು ಅಯ್ಯಾ, ನನ್ನ ಬಗ್ಗೆ ಹೀಗೆ ನೀನು ಮಾಡಬಾರದಿತ್ತು, ಏಕೆ ಹೀಗೆ ಮಾಡಿದೆ? ನಿನ್ನ ಪ್ರಾಣ ಉಳಿಸಿದ್ದಕ್ಕಾಗಿ ನನ್ನ ಪ್ರಾಣವನ್ನು ತೆಗೆಯಲು ಏಕೆ ಹೊರಟೆ? ಓಹ್! ಇದು ಪಾಪಕರ್ಮ, ಇದರ ಫಲವು ನಿನಗೆ ಸಿಗದಿರಲಿ, ಈ ನಿನ್ನ ಕೃತ್ಯದಿಂದ ನೀನು ದೀರ್ಘಕಾಲ ದುಃಖದಿಂದ ನರಳದಿರಲಿ, ನೀನು ಸುಖಿಯಾಗಿರು ಎಂದಿತು.
ಆಗ ಕೃಷಿಕನು ಕ್ಷಮೆಯಾಚಿಸಿದನು ಮತ್ತು ತಾನು ನಗರಕ್ಕೆ ಹೋಗಲು ಮಾರ್ಗವನ್ನು ಕೇಳಿದನು. ಆತನಿಗೆ ಕಾಡಿನ ಮಾರ್ಗ ತಿಳಿದಿರಲಿಲ್ಲ.
ಅದಕ್ಕೆ ಆ ಮಹಾಕಪಿಯು ಹೀಗೆ ಉತ್ತರಿಸಿತು: ಓ ಅಸಂಯಮಿ, ನಿನ್ನ ಮೇಲೆ ನನಗೆ ನಂಬಿಕೆಯಿಲ್ಲ. ಆದರೂ ನಿನಗೆ ಸಹಾಯ ಮಡುವೆ, ನಾನು ಕೊಂಬೆಯಿಂದ ಕೊಂಬೆಗೆ ಹಾರುತ್ತಿರುತ್ತೇನೆ, ನನ್ನ ರಕ್ತದ ಬಿಂದುಗಳು ನೆಲದ ಮೇಲೆ ಬೀಳುತ್ತಿರುತ್ತವೆ. ಅವನ್ನೇ ಹಿಂಬಾಲಿಸುತ್ತ ನೀನು ನಗರವನ್ನು ಸೇರುವಂತಾಗು ಎಂದಿತು.
ಹಾಗೆಯೇ ಅದು ಹಾರುವಾಗ ನೋಡುತ್ತ, ಅದರ ರಕ್ತದ ಬಿಂದುಗಳನ್ನು ಹಿಂಬಾಲಿಸುತ್ತ ಆ ಕೃಷಿಕನು ನಗರ ಸೇರಿದನು.
ಆದರೆ ತನ್ನ ಹೀನ ಕರ್ಮದಿಂದಾಗಿ ಆತನಿಗೆ ಕುಷ್ಟರೋಗ ಉಂಟಾಯಿತು. ಅಸಹ್ಯಕರ ಹುಣ್ಣುಗಳಿಂದ ದುವರ್ಾಸನೆಯಿಂದ ಕೂಡಿದ ದೇಹದಿಂದ ಆತನು ಕೂಡಿಕೊಂಡನು. ಜನರು ಆತನಿಗೆ ಕಲ್ಲೆಸೆದು ದೂರ ಓಡಿಸಿದರು.
ಓ ಉಪಕಾರಕ್ಕೆ ಅಪಕಾರ ಬೇಡ, ಪ್ರಾಣ ಉಳಿಸಿದವನಿಗೆ ಪ್ರಾಣ ತೆಗೆಯುವ ಯೋಚನೆ ಸಹಾ ಬೇಡ. ಮಿತ್ರದ್ರೋಹ ಮಾಡಿದವನಿಗೆ ಕುಷ್ಟರೋಗ ಉಂಟಾಗುತ್ತದೆ ಹಾಗು ಸತ್ತನಂತರ ನರಕಪ್ರಾಪ್ತಿ ಎಂದು ತನ್ನ ಬಗ್ಗೆ ಕೇಳಿದವರಿಗೆ ಆತನು ಹೇಳುತ್ತಿದ್ದನು.

No comments:
Post a Comment