ಸಜೀವ ದೇಹ ದಾನ ಮಾಡಿದ ಮಹಾಸತ್ವ ಬೋಧಿಸತ್ವ
ಬಹುಕಾಲದ ಹಿಂದೆ ಮಹಾರಟ್ಠ ಎಂಬ ಬಲಿಷ್ಠ ರಾಜನಿದ್ದನು. ಆತನಿಗೆ ಮೂರು ಮಕ್ಕಳು. ಅವರೆಂದರೆ, ಮಹಾಪ್ರಶಾದ, ಮಹಾದೇವ ಮತ್ತು ಮಹಾಸತ್ವ. ಅವರೆಲ್ಲರೂ ಉತ್ತಮರು ಮತ್ತು ವಿನಮ್ರರಾಗಿದ್ದರು.
ಒಂದುದಿನ ಮೂವರು ರಾಜಕುಮಾರರು ಅರಣ್ಯಕ್ಕೆ ಭೇಟಿ ನೀಡಿದಾಗ ಆ ಕಾಡಿನ ಸೌಂದರ್ಯಕ್ಕೆ ಮನಸೋತು ದಾರಿತಪ್ಪಿದರು. ದಟ್ಟ ಅರಣ್ಯದಲ್ಲಿಯೇ ಅಡ್ಡಾಡುತ್ತ ಅವರು ಒಂದು ಪರ್ವತದ ಮೇಲೆ ನಿಂತರು. ಹಿರಿಯವನಾದ ಮಹಾಪ್ರಶಾದನು ಆ ಹೆಬ್ಬಂಡೆಯ ಕೆಳಗೆ ಹೆಣ್ಣು ಹುಲಿಯನ್ನು ನೋಡಿದನು. ಅದರ ಜೊತೆಗೆ ಐದು ಮರಿಗಳಿದ್ದವು. ಆ ಹೆಣ್ಣು ಹುಲಿಯು ಪ್ರಸವ ನಿಡಿದ ಬಳಿಕ ಏಳು ದಿನಗಳವರೆಗೂ ಏನನ್ನೂ ತಿಂದಿರಲಿಲ್ಲ. ಮರಿಗಳು ಹಾಲನ್ನು ಉಣಲು ಬಂದರೂ ಅವುಗಳ ಹಸಿವನ್ನು ತೃಪ್ತಿಪಡಿಸಲು ಸಾಧ್ಯವಿರಲಿಲ್ಲ. ಅಪಾರ ಹಸಿವಿನಿಂದ ಆ ಹೆಣ್ಣು ಹುಲಿಯು ತನ್ನ ಮರಿಗಳನ್ನೇ ತಿನ್ನಲು ಯೋಚಿಸಿತು. ಅದರ ವರ್ತನೆಯು ಹಾಗೆ ತೋರಿಸಿತು.
ಇದನ್ನು ಕಂಡ ಮೂವರು ಸಹೋದರರು ಕರುಣೆ ವ್ಯಕ್ತಪಡಿಸಿದರು. ಹಿರಿಯರಾದ ಇಬ್ಬರು ಹುಲಿಗೆ ಆಹಾರ ತರಲು ಅಲ್ಲಿಂದ ತೆರಳಿದರು. ಆದರೆ ಕಿರಿಯವ ಬೋಧಿಸತ್ವನಾಗಿದ್ದನು. ಆತನು ಹೀಗೆ ಚಿಂತಿಸುತ್ತಿದ್ದನು:
"ಏತಕ್ಕಾಗಿ ಇನ್ನೊಂದು ಜೀವಿಯ ಮಾಂಸಕ್ಕಾಗಿ ಹುಡುಕಬೇಕು. ನನ್ನ ಶರೀರವೇ ಇಲ್ಲಿದೆಯಲ್ಲಾ! ಈ ಶರೀರವಂತು ದುಃಖ ಮೂಲ. ಈ ಶರೀರವನ್ನು ಪರಹಿತಕ್ಕಾಗಿ ಬಳಸದವನು ಜ್ಞಾನಿಯೇ ಅಲ್ಲ. ಪರರು ದುಃಖದಲ್ಲಿರುವಾಗ ನಾನು ಸುಖಿಸುವುದೆಂತು. ನಾನು ನನ್ನ ಶರೀರವನ್ನು ಈ ಹುಲಿಗೆ ಅಪರ್ಿಸಿದರೆ ಹೇಗೆ? ಮುಗ್ಧ ಮರಿಗಳು ತಾಯಿಯಿಂದಲೇ ಸಾಯುವ ಮುನ್ನ, ಹಸಿವಿಗಾಗಿ ತಾಯಿಯೇ ತನ್ನ ಮರಿಗಳನ್ನು ಹತ್ಯೆ ಮಾಡುವ ಮುನ್ನ, ನನ್ನ ದೇಹವನ್ನು ಅಪರ್ಿಸಬೇಕು. ಹೀಗೆ ಮಾಡುವುದರಿಂದಾಗಿ ನಾನು ದುರ್ಬಲರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ದಾನ ಪ್ರಜ್ಞಾರಿಗೆ ಆನಂದ ತಂದಂತೆ ಆಗುವುದು. ಶೀಲವಂತರಿಗೆ ದಾನಿಗಳಿಗೆ ಪ್ರೋತ್ಸಾಹಿಸಿದಂತಾಗುವುದು. ನನ್ನ ದೇಹವನ್ನೇ ದಾನ ಮಾಡುವ ಅಪೂರ್ವ ಅಪರೂಪದ ಅವಕಾಶವಿದು. ಕೇವಲ ಕರುಣಾಭರಿತ ನಿಸ್ವಾರ್ಥ ಮಾಡುವಂತಹ ಕಾರ್ಯವಿದು.
ಪರರ ಹಿತಕ್ಕಾಗಿ ನಾನು ದುಡಿಯಲೇಬೇಕಾಗಿದೆ. ಸರ್ವ ಜೀವಿಗಳೊಂದಿಗೆ ದಯೆಯುಳ್ಳವನಾಗಲೇಬೇಕಾಗಿದೆ. ದುಃಖಿತರಿಗೆ ಸಹಾಯ ಮಾಡುವುದೇ ನನ್ನ ಅಗ್ರ ಕರ್ತವ್ಯವಾಗಿದೆ. ಈ ಅಶುಭವಾದ ಶರೀರವನ್ನು ನಾನು ಹೆಣ್ಣು ಹುಲಿಗೆ ಮತ್ತು ಅದರ ಐದು ಮರಿಗಳಿಗೆ ಅಪರ್ಿಸುವೆನು". "ಈ ಮಹಾ ಪುಣ್ಯ ಕಾರ್ಯದಿಂದಾಗಿ ನಾನು ಸಮ್ಮಾಸಂಬುದ್ಧತ್ವವನ್ನು ಪಡೆಯುವಂತಗಲಿ. ಸಂಸಾರದಲ್ಲಿರುವ ಸರ್ವಜೀವಿಗಳನ್ನು ರಕ್ಷಿಸುವಂತಾಗಲಿ! ಸರ್ವ ಜೀವಿಗಳು ಸುಖಿಯಾಗಿರಲಿ ಮತ್ತು ಕ್ಷೇಮವಾಗಿರಲಿ," " ಇನ್ನು ತಡಬೇಡ "
ಎಂದು ಹೆಬ್ಬಂಡೆಯಿಂದ ಹಾರಿ ಹೆಣ್ಣು ಹುಲಿಯ ಮುಂದೆ ಅಷ್ಟು ಎತ್ತರದಿಂದ ಮಹಾಸತ್ವರು ಬಿದ್ದುಬಿಟ್ಟರು. ಆದರೆ ಅವರಿಗೆ ತಕ್ಷಣ ಸಾವು ಲಭಿಸಲಿಲ್ಲ. ಆ ಹುಲಿಯು ಸಹಾ ಕ್ರೂರಿಯಾಗಿದ್ದರೂ ಬೋಧಿಸತ್ವರ ಮೇಲೆ ದಯೆಬೀರಿ ಅವರ ದೇಹವನ್ನು ಸ್ಪಶರ್ಿಸಲಿಲ್ಲ.
ಆದರೆ ಬೋಧಿಸತ್ವರು ಹೀಗೆ ಯೋಚಿಸಿದರು: "ಓಹ್, ಈ ಹುಲಿಯು ನನ್ನನ್ನು ತಿನ್ನಲಾರದಷ್ಟು ದುರ್ಬಲವಾಗಿದೆ" ಎಂದು ಯೋಚಿಸಿ ತನ್ನನ್ನು ತಾನು ಮುಗಿಸಿಕೊಳ್ಳಲು ಆಯುಧ ಹುಡುಕಿ ಕೊನೆಗೆ ಕತ್ತನ್ನು ಕತ್ತರಿಸಿಕೊಂಡು ಅದರ ಮುಂದೆ ಬಿದ್ದುಬಿಟ್ಟರು.
ಆಗ ಆ ಹುಲಿಯು ಹಸಿವಿನಿಂದ ಉದ್ರೇಕಗೊಂಡು ರಕ್ತವನ್ನು ಕುಡಿಯಿತು. ಮಾಂಸವನ್ನು ತಿಂದಿತು ಮತ್ತು ಮೂಳೆಗಳನ್ನು ಉಳಿಸಿತು.
ಆಗ ಭೂಮಿ ಕಂಪಿಸಿತು, ಸಾಗರ ನಡುಗಿತು, ಸೂರ್ಯ ಮಂಕಾದನು. ದೇವದೇವತೆಗಳೆಲ್ಲರೂ ಸಾಧು ಸಾಧು ಸಾಧು ಎಂದು ಉದ್ಗಾರ ತೆಗೆದರು.
ನಂತರ ವಿಷಯವೆಲ್ಲಾ ಎಲ್ಲೆಡೆ ಹಬ್ಬಿತು. ಎಲ್ಲರೂ ದಿಗ್ಭ್ರಾಂತರಾದರು. ತಂದೆ-ತಾಯಿಗಳು ಮೂಛರ್ಿತರಾದರು. ನಂತರ ಅಲ್ಲಿ ಚೇತಿಯ ಕಟ್ಟಿಸಲಾಯಿತು. ಅದರ ಮೇಲೆ ನಮೋ ಬೋಧಿಸತ್ವ ಎಂದು ಕೆತ್ತಲಾಯಿತು.

No comments:
Post a Comment