ಬೋಧಿಸತ್ತರ ದಾನ ಪರಾಕ್ರಮ
ದಾನಕ್ಕೆ ಯಾರಾದರೂ ಆದರ್ಶವಾಗಿದ್ದರೆ ಅದು ಬೋಧಿಸತ್ತರೇ ಆಗಿರುತ್ತಾರೆ. ಏಕೆಂದರೆ ಅಂತಹ ದಾನವನ್ನು ನಾವು ಬೇರೆಡೆ ಕಂಡಿಲ್ಲ, ಕೇಳಿಲ್ಲ ಹಾಗೂ ಓದಿಲ್ಲ. ಬೋಧಿಸತ್ತ ಎಂದರೆ ಬೋಧಿಜ್ಞಾನ ಪಡೆಯಲಿರುವ ಅರ್ಹ ಜೀವಿ ಅಥವಾ ಜ್ಞಾನದ ಜೀವಿ ಅಥವಾ ಕರುಣಾ ಜೀವಿ. ಬೋಧಿಪ್ರಾಪ್ತಿಗೆ ಸಮರ್ಥ ವ್ಯಕ್ತಿ ಎಂದೆಲ್ಲಾ ಹೇಳುತ್ತಾರೆ. ಅಂದರೆ ಬುದ್ಧತ್ವ ಪಡೆಯಲು ಹಂಬಲಿಸುವ ಯೋಗ್ಯ ವ್ಯಕ್ತಿ.ಸಿದ್ಧಾರ್ಥ ಗೋತಮ ಬುದ್ಧರು ಬೋಧಿ ಪ್ರಾಪ್ತಿಯ ಮುನ್ನ ಬೋಧಿಸತ್ವರೇ ಆಗಿದ್ದರು. ಈ ಬೋಧಿಸತ್ವರೇ ಬೋಧಿ ಪ್ರಾಪ್ತಿಯ ನಂತರ ಬುದ್ಧರಾಗುತ್ತಾರೆ. ಹೀಗಾಗಿ ಸಾಮಾನ್ಯ ವ್ಯಕ್ತಿಯು ಬುದ್ಧನಾಗಲಾರ, ಆದರೆ ಬೋಧಿಸತ್ವರು ಬುದ್ಧರಾಗುತ್ತಾರೆ. ಅಂದರೆ ಸಾಮಾನ್ಯ ವ್ಯಕ್ತಿಯು ಮೊದಲು ಬೋಧಿಸತ್ವನಾಗಿ ನಂತರ ಬುದ್ಧನಾಗಬಹುದು. ಆದರೆ ಬುದ್ಧತ್ವವು ಒಂದೇ ಜನ್ಮದಲ್ಲಿ ಸಾಧಿಸುವಂತಹುದಲ್ಲ. ಅದಕ್ಕಾಗಿ ಕೋಟ್ಯಾಂತರ ಜನ್ಮಗಳಲ್ಲಿ ಬೋಧಿಸತ್ವರು ಶ್ರಮಿಸಿ ಅಂತಿಮ ಜನ್ಮದಲ್ಲಿ ಬುದ್ಧರಾಗುತ್ತಾರೆ. ಸಾಮಾನ್ಯ ವ್ಯಕ್ತಿಯು ಬೋಧಿಸತ್ವನಾಗಲು ಹಾಗು ಬೋಧಿಸತ್ವರು ಬುದ್ಧರಾಗಲು ಅವರು ಪಾರಮಿಗಳನ್ನು ಪರಿಪೂರ್ಣಗೊಳಿಸಬೇಕಾಗುತ್ತದೆ. ಪಾರಮಿಗಳೆಂದರೆ ಪರಿಪೂರ್ಣಗೊಳಿಸಲು ಅರ್ಹವಾದ ಸದ್ಗುಣಗಳು.
ಈ ಪಾರಮಿಗಳು ಹತ್ತು. ಆದರೆ ಬುದ್ಧತ್ವ ಸಾಧಿಸಲು ಈ ಹತ್ತು ಪಾರಮಿಗಳನ್ನು ಮೂರು ವಿಶಿಷ್ಟ ಹಂತಗಳಲ್ಲಿ ಪರಿಪೂರ್ಣಗೊಳಿಸಬೇಕಾಗುತ್ತದೆ. ಮೂರು ವಿಶಿಷ್ಟ ಹಂತದ ಪಾರಮಿಗಳೆಂದರೆ ಪಾರಮಿ, ಉಪಪಾರಮಿ, ಪರಮತ್ಥ ಪಾರಮಿ. ಈ ಪಾರಮಿಗಳು ಹತ್ತು, ಅವೆಂದರೆ: 1) ದಾನ 2) ಶೀಲ 3) ತ್ಯಾಗ 4) ಪ್ರಜ್ಞಾ 5) ವೀರ್ಯ 6) ಕ್ಷಾಂತಿ 7) ಸತ್ಯ 8) ಆದಿಷ್ಠಾನ 9) ಮೆತ್ತಾ ಮತ್ತು 10) ಉಪೇಕ್ಷಾ.
ಈ ಪಾರಮಿಗಳಲ್ಲಿ ಮೊತ್ತ ಮೊದಲನೆಯದೇ ದಾನ ಆಗಿದೆ. ಬೋಧಿಸತ್ವರು ದಾನವನ್ನು ಪರಿಪೂರ್ಣಗೊಳಿಸಿಯೇ ಮುಂದಿನ ಪಾರಮಿಗೆ ಹೋಗಬಹುದು ಅಥವಾ ದಾನದ ಜೊತೆಗೆ ಉಳಿದ ಪಾರಮಿಗಳನ್ನು ವೃದ್ಧಿಸಬಹುದು. ಆದರೆ ಒಂದು ಜನ್ಮದಲ್ಲಿ ಒಂದು ಪಾರಮಿಯನ್ನು ಮಾತ್ರ ಪರಮಾರ್ಥ ಪಾರಮಿಯಾಗಿ ಸಾಧಿಸಬಹುದು.
ಮಹಾಯಾನ ಬೌದ್ಧ ಪಂಥಿಯರು ಈ ಹತ್ತು ಪಾರಮಿಗಳು ಆರರಲ್ಲೇ ವಿಲೀನಗೊಳಿಸಿ ಆರು ಪಾರಮಿತಗಳೇ ಸಾಕು ಎಂದಿದ್ದಾರೆ. ಅವರ ಆರು ಪಾರಮಿತಗಳು ಹೀಗಿವೆ:
1) ದಾನ ಪಾರಮಿತ 2) ಶೀಲ ಪಾರಮಿತ 3) ಕ್ಷಾಂತಿ ಪಾರಮಿತ
4) ವೀರ್ಯ ಪಾರಮಿತ 5) ಸಮಾಧಿ ಪಾರಮಿತ 6) ಪ್ರಜ್ಞಾ ಪಾರಮಿತ.
ಈಗ ಈ ಕೃತಿಯಲ್ಲಿ ದಾನ ಪಾರಮಿತದ ಬಗ್ಗೆ ವಿವರವಾಗಿ ಅರಿಯೋಣ.

No comments:
Post a Comment