Monday, 16 December 2019

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ

ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು. ಅದಕ್ಕೆ ಉದಾಹರಣೆಯೇ ಸಸ ಬೋಧಿಸತ್ವರ ಈ ದಾನಕಥೆ.
ಬಹುಕಾಲದ ಹಿಂದೆ ಬೋಧಿಸತ್ವರು ಮೊಲವಾಗಿ ಹುಟ್ಟಿದ್ದರು. ಆದರೂ ಸಹಾ ಪೂರ್ವ ಜನ್ಮಗಳ ನೆನಪಿನಿಂದಾಗಿ ಹಾಗು ನಿರಂತರ ಆಚರಣೆಗಳಿಂದಾಗಿ ಅವರು ಮೊಲವಾಗಿ ಹುಟ್ಟಿದ್ದರೂ ಸಹಾ ಅವರು ದಾನವನ್ನು ಮರೆಯುತ್ತಿರಲಿಲ್ಲ, ಶೀಲವನ್ನು ಭಂಗ ಮಾಡುತ್ತಿರಲಿಲ್ಲ. ಹುಣ್ಣಿಮೆಯ ದಿನ ಉಪೋಸಥ ವ್ರತಗಳನ್ನು ಪಾಲಿಸುತ್ತಿತ್ತು. ಹಾಗೆಯೇ ತನ್ನಂತೆ ಇತರರನ್ನು ದಾನಿಗಳಾಗಿ, ಶೀಲವಂತರಾಗಿ ಪರಿವತರ್ಿಸಲು ಯತ್ನಿಸುತ್ತಿತ್ತು. ಅದರಂತೆಯೇ ಅದಕ್ಕೆ ನೀರುಬೆಕ್ಕು, ನರಿ ಮತ್ತು ಕೋತಿಗಳ ಸ್ನೇಹ ಉಂಟಾಯಿತು. ಅವಕ್ಕೂ ಅದು ಬೋಧನೆ ನೀಡಿ ಧಮ್ಮದಲ್ಲಿ ಪ್ರತಿಷ್ಠಾಪಿಸಿತ್ತು.
ಹೀಗೆ ಕಾಲದ ಪ್ರಯೋಜನ ಪಡೆಯುತ್ತಿರಬೇಕಾದರೆ ಒಂದುದಿನ ಚಂದ್ರನನ್ನು ಕಂಡು ಮೊಲವು ತನ್ನ ಸ್ನೇಹಿತರಾದ ಬೆಕ್ಕು, ನರಿ ಮತ್ತು ಕೋತಿಗಳಿಗೆ ಹೀಗೆ ಹೇಳಿತು: ನಾಳೆ ಹುಣ್ಣಿಮೆ, ನಾಳೆ ಶೀಲಗ್ರಹಣೆ ಮಾಡಿ ಪಾಲಿಸುತ್ತ ಉಪವಾಸದಲ್ಲಿ ತೊಡಗಿ, ಯಾಚಕರು ಯಾರೇ ಆಗಿರಲಿ ಅವರಿಗೆ ದಾನ ನೀಡೋಣ ಎಂದು ಅವರ ಮನವೊಲಿಸಿತು.
ಅದರಂತೆಯೇ ಅವು ಅಂದು ಶೀಲವನ್ನು ಪಾಲಿಸುತ್ತ, ಉಪವಾಸದಲ್ಲಿ ತೊಡಗಿ ಮೈತ್ರಿಯ ಚಿಂತನೆ ಮಾಡುತ್ತಾ, ದಾನ ನೀಡಲು ಯಾಚಕರಿಗೆ ಕಾಯುತ್ತ ಇದ್ದವು.
ಇವುಗಳ ಧಮರ್ಾಚರಣೆಯೂ ಇಂದ್ರನ ಗಮನಕ್ಕೂ ಬಂದಿತು. ಆತನು ಇವರೆಲ್ಲರನ್ನು ಪರೀಕ್ಷಿಸಲು ಬಂದನು. ಆತನು ಮೊದಲಿಗೆ ನೀರುಬೆಕ್ಕಿನ ಬಳಿಗೆ ಬಂದನು. ಅದು ಹತ್ತಿರದ ನೀರಿನಿಂದ ಏಳು ಕೆಂಪು ಮೀನುಗಳನ್ನು ತಂದು ದಾನ ನೀಡಬೇಕೆಂದು ಇಟ್ಟುಕೊಂಡಿತ್ತು. ಬ್ರಾಹ್ಮಣ ವೇಷಧಾರಿಯಾದ ಇಂದ್ರನಿಗೆ ಅದು ಏಳು ಕೆಂಪು ಮೀನುಗಳನ್ನು ನೀಡಲು ಮುಂದಾಯಿತು. ಆದರೆ ಬ್ರಾಹ್ಮಣ ಆಮೇಲೆ ಬರುತ್ತೇನೆ ಎಂದು ಹೊರಟನು.
ನಂತರ ಆ ಬ್ರಾಹ್ಮಣನು ನರಿಯ ಬಳಿಗೆ ಬಂದಾಗ, ಅದು ಸುಟ್ಟ ಮಾಂಸ ಮತ್ತು ಮೊಸರನ್ನು ದಾನವಾಗಿ ನೀಡಲು ಮುಂದಾಯಿತು. ಆದರೆ ಬ್ರಾಹ್ಮಣನು ಅದನ್ನು ಆಮೇಲೆ ಸ್ವೀಕರಿಸುವೆ ಎಂದು ಹೇಳಿ ಮುಂದೆ ನಡೆದನು.
ನಂತರ ಅವನು ಕೋತಿಯ ಬಳಿಗೆ ಬಂದಾಗ ಅದು ಮಾವಿನ ಗೊಂಚಲನ್ನು ನೀಡಲು ಮುಂದಾಯಿತು. ಆ ಬ್ರಾಹ್ಮಣನು ಪುನಃ ಬರುವೆ ಎಂದು ನುಡಿದು ಮೊಲದ ಬಳಿಗೆ ಬಂದರು.
ಆ ಸಮಯದಲ್ಲಿ ಮೊಲವು ದಾನದ ಬಗ್ಗೆ ಹೀಗೆ ಗಂಭೀರವಾಗಿ ಚಿಂತಿಸುತ್ತಿತ್ತು. ನಾನು ಯಾಚಕರಿಗೆ ಹುಲ್ಲು ನೀಡಲಾರೆ, ಎಳ್ಳಾಗಲಿ ಅಥವಾ ಅಕ್ಕಿಯಾಗಲಿ ನನ್ನಲ್ಲಿ ಇಲ್ಲ. ಆದ್ದರಿಂದ ನನ್ನ ದೇಹವನ್ನು ದಾನವಾಗಿ ನೀಡಿದರೆ ಹೇಗೆ?
ಅದೇ ಸಮಯದಲ್ಲಿ ಬ್ರಾಹ್ಮಣ ಅಲ್ಲಿಗೆ ಬಂದಾಗಿ ದಾನ ನೀಡಲು ಅದು ಅತ್ಯಂತ ಆನಂದವನ್ನೇ ವ್ಯಕ್ತಪಡಿಸಿತು. ಅದು ಬ್ರಾಹ್ಮಣನಿಗೆ ಹೀಗೆ ಹೇಳಿತು: ಓ ಬ್ರಾಹ್ಮಣ, ನನ್ನ ಬಳಿ ಯಾಚನೆಗೆ ಬಂದು, ಮಹದುಪಕಾರವನ್ನೇ ಮಾಡಿರುವೆ. ಆದರೆ ನನ್ನ ಬಳಿ ಅಕ್ಕಿಯಾಗಲಿ, ಎಳ್ಳಾಗಲಿ, ಕೊನೇಪಕ್ಷ ಹುಲ್ಲು ಸಹಾ ನನ್ನಲ್ಲಿಲ್ಲ. ಆದರೆ ನನ್ನ ದೇಹವೇ ದಾನಕ್ಕೆ ಸಿದ್ಧವಾಗಿದೆ, ದಯವಿಟ್ಟು ಸ್ವೀಕರಿಸಲು ಸಂಕೋಚಿಸಬೇಡ, ನೀನೇನು ಕೊಲ್ಲಬೇಕಾಗಿಲ್ಲ, ಕೇವಲ ಅಗ್ನಿಯನ್ನು ಸಿದ್ಧಪಡಿಸಿದರೆ ಸಾಕು, ನಾನು ಅಗ್ನಿಯನ್ನು ಕಂಪಿಸದೆ ಪ್ರವೇಶ ಮಾಡುವೆ, ನನ್ನನ್ನು ತಿಂದು ಸುಖವಾಗಿರು.
ಇಂದ್ರನು ಇದನ್ನು ಕೇಳಿ ಸ್ತಂಭೀಭೂತನಾದನು. ಆದರೂ ಪರೀಕ್ಷಿಸಲು ಮುಂದಾದನು. ಆತನು ಬೆಂಕಿಯನ್ನು ಸಿದ್ಧಪಡಿಸಿದನು. ಆಗ ಮೊಲವು ಅಗ್ನಿ ಪ್ರವೇಶಿಸುವ ಮುನ್ನ ದೇಹವನ್ನು ಪ್ರಬಲವಾಗಿ ಒದರಿತು.
ಅದನ್ನು ಕಂಡು ಇಂದ್ರನು ಓ ಮೊಲವೆ, ನಿನಗೆ ಭಯವಾದರೆ ಬೇಡ ಎಂದನು. ಆದರೆ ಆ ಮೊಲವು ಹೀಗೆ ಹೇಳಿತು: ಓ ಬ್ರಾಹ್ಮಣ, ನಾನು ದಾನ ನೀಡಲು ಎಂದಿಗೂ ನಡುಗಲಾರೆನು. ನಾನು ನನ್ನ ಶರೀರವನ್ನು ಒದರಿದ್ದು ಏಕೆಂದರೆ ಕೂದಲಿನಲ್ಲಿ ನೆಲೆಸಿರುವ ಕ್ರಿಮಿಗಳು ಅಗ್ನಿಗೆ ಆಹುತಿಯಾಗದಿರಲೆಂದು ಎಂದು ಹೇಳಿ ಅಗ್ನಿಯ ಮಧ್ಯೆ ಹೋಗಿ ಕುಳಿತಿತು. ಆದರೆ ಆಶ್ಚರ್ಯ ಬೆಂಕಿಯೇ ಅದಕ್ಕೆ ಸುಡಲಿಲ್ಲ. ಅದು ಆಶ್ಚರ್ಯದಿಂದಾಗಿ ಬ್ರಾಹ್ಮಣನಿಗೆ ನೋಡಿತು. ಆಗ ಇಂದ್ರನು ತನ್ನ ನಿಜರೂಪವನ್ನು ತೋರಿಸಿ ತಾನು ಪರೀಕ್ಷಿಸಲು ಬಂದಿದ್ದೆ ಎಂದು ಹೇಳಿದನು. ಆಗ ಮೊಲವು ಹೀಗೆ ಸಿಂಹನಾದ ಮಾಡಿತು: ಓ ಸಕ್ಕ, ನೀನೇ ಅಲ್ಲ, ಇಡೀ ಪ್ರಪಂಚದ ಯಾವ ವ್ಯಕ್ತಿಯೇ ಆಗಿರಲಿ, ನನ್ನಲ್ಲಿ ದಾನಕ್ಕೆ ವಿರುದ್ಧವಾದ ಇಚ್ಛೆಯನ್ನು ಕಾಣಲಾರರು. ಸದಾ ದಾನದ ಇಚ್ಛೆಯನ್ನು, ಆಚರಣೆಯನ್ನೇ ಕಾಣುವರು.
ಸಂತುಷ್ಟನಾದ ಇಂದ್ರನು ನಾಲ್ಕು ಪ್ರಾಣಿಗಳಿಗೂ ಹರಸಿ ಅಂತದರ್ಾನವಾದನು. 

ಬೋಧಿಸತ್ವರ ಪರಮತ್ಥ ಪಾರಮಿ

ಬೋಧಿಸತ್ವರ ಪರಮತ್ಥ ಪಾರಮಿ

 ಬೋಧಿಸತ್ವ ಮಹಾನಂದಿಯ

ಬಹುಕಾಲದ ಹಿಂದೆ ಬೋಧಿಸತ್ವರು ಮಹಾನಂದಿಯನೆಂಬ ವಾನರರಾಗಿ ಹುಟ್ಟಿದರು. ಅವರಿಗೆ ಒಬ್ಬ ತಮ್ಮ ಇದ್ದ. ಆತನು ಚುಲ್ಲನಂದಿಯನಾಗಿದ್ದನು. ಮಹಾನಂದಿಯರು ಅಲ್ಲಿದ್ದ ಇಡೀ ವಾನರಗಣಕ್ಕೆ ನಾಯಕರಾಗಿದ್ದರು. ಆದರೆ ನಂದಿಯ ಸೋದದರ ತಾಯಿಯು ಕುರುಡಿಯಾಗಿತ್ತು. ಆ ಕುರುಡಿ ತಾಯಿಗೆ ನಿಗ್ರರ್ೊಧ ವೃಕ್ಷದಲ್ಲಿ ನೆಲೆಸಲು ಅನುಕೂಲ ಮಾಡಿಕೊಟ್ಟು ಪ್ರತಿನಿತ್ಯ ಹಣ್ಣು ಹಂಪಲುಗಳನ್ನು ನಂದಿಯ ಸೋದರರು ಕಳುಹಿಸುತ್ತಲೇ ಇದ್ದರು.
ಒಂದುದಿನ ತಾಯಿಯನ್ನು ಬಂದು ನೋಡಿದಾಗ ಆ ಮುದಿ ಕೋತಿಯು ಅತಿಕೃಶವಾಗಿ ಬಿಟ್ಟಿತ್ತು. ಆಗ ನಂದಿಯ ಹೀಗೆ ಕೇಳಿದನು ಅಮ್ಮ, ನಾನು ಪ್ರತಿದಿನ ನಿನಗೆ ಹಣ್ಣುಗಳನ್ನು ಕಳುಹಿಸುತ್ತಲೆ ಇದ್ದೀವಲ್ಲ, ನೀನೇಕೆ ಹೀಗಾಗಿದ್ದೀ? ಅದಕೆ ತಾಯಿಯು: ಮಗು ನನಗೆ ಯಾರೂ ತಂದು ನೀಡಲಿಲ್ಲ ಎಂದಿತು. ಆಗ ಕೂಡಲೇ ಮಹಾನಂದಿಯನಿಗೆ ತನ್ನ ಕೃತಘ್ನ ಅನುಚರರ ಮೇಲೆ ಅಸಹ್ಯ ಉಂಟಾಯಿತು. ಆದರೂ ಸೈರಿಸಿಕೊಂಡು ತನ್ನ ತಮ್ಮನಿಗೆ ನಾಯಕನಾಗುವಂತೆ ಹೇಳಿತು. ಆದರೆ ಆ ತಮ್ಮ ಚುಲ್ಲನಂದಿಯನು ಅದಕ್ಕೆ ಒಪ್ಪದೆ ಹೋದಾಗ, ಅವರಿಬ್ಬರೂ ವಾನರ ಗಣದಿಂದ ನಿವೃತ್ತಿ ತಾಳಿದರು. ಬೇರೆ ವಾನರರು ಆ ನಾಯಕತ್ವ ಸ್ವೀಕರಿಸಿದರು. ಈ ಇಬ್ಬರು ವಾನರರು ಈಗ ತುಂಬಾ ಚೆನ್ನಾಗಿ ತಾಯಿಗೆ ಸೇವೆ ಸಲ್ಲಿಸುತ್ತ ಕಾಲಕಳೆದರು.
ಅದೇ ಸಮಯದಲ್ಲಿ ವಾರಣಾಸಿಯ ವಿದ್ಯಾಥರ್ಿಯೊಬ್ಬ ಶಿಕ್ಷಣ ಮುಗಿಸಿ, ಸುಲಭವಾದ ವೃತ್ತಿಯೆಂದು ಬೇಟೆಯನ್ನೇ ತನ್ನ ವೃತ್ತಿಯಾಗಿ ಆರಿಸಿಕೊಂಡಿದ್ದನು, ಅದರಲ್ಲೇ ಜೀವಿಸುತ್ತಿದ್ದನು. ಒಂದುದಿನ ಆತನಿಗೆ ಬೇಟೆಗೆ ಯಾವ ಪ್ರಾಣಿಯೂ ದೊರೆಯದಾಯಿತು. ಆಗ ಆತನ ಕಣ್ಣಿಗೆ  ಮೂರು ಕೋತಿಗಳು ಕಂಡವು. ಬೇಟೆಗಾರನು ಬಾಣದಿಂದ ಗುರಿಯಿಟ್ಟನು. ತಕ್ಷಣ ಬಲಿಷ್ಠವಾಗಿದ್ದ ಸೋದರರು ತಾವು ಕೊಂಬೆಗಳಲ್ಲಿ ಹಾರಿ ಅಡಗಿಕೊಂಡರು. ತಮ್ಮ ಮುದಿ ತಾಯಿಗೆ ಬೇಟೆಗಾರನು ಏನೂ ಮಾಡಲಾರ ಎಂದು ಅವು ನಂಬಿದ್ದವು. ಆದರೆ ಆ ಬೇಟೆಗಾರನು ಈಗ ಮುದಿತಾಯಿಗೆ ಗುರಿಯಿಟ್ಟನು. ಇದರಿಂದ ನಡುಗಿದ ಮಹಾನಂದಿಯ ಚಂಗನೆ ಹಾರಿ ತಾಯಿಯ ಮುಂದೆ ಬಂದು ನಿಂತಿತು. ತನ್ನನ್ನು ಕೊಂದು ಹಾಕು, ಆದರೆ ತಾಯಿಯನ್ನು ಬಿಟ್ಟುಬಿಡು ಎಂದು ಪ್ರಾಥರ್ಿಸಿತು. ಆ ನಿರ್ದಯಿ ಬೇಟೆಗಾರ ಬೋಧಿಸತ್ವರನ್ನು ಬಾಣದಿಂದ ಸಂಹರಿಸಿಬಿಟ್ಟನು. ಮತ್ತೆ ಆತನು ತಾಯಿ ಕೋತಿಯನ್ನು ಕೊಲ್ಲಲು ಮುಂದಾದನು. ಈ ಬಾರಿ ಚುಲ್ಲನಂದಿಯ ತನ್ನ ಅಣ್ಣನ ತ್ಯಾಗದಿಂದ ಹಾಗೂ ತಾಯಿಯ ಮೇಲಿನ ಭಕ್ತಿಯಿಂದಾಗಿ, ತಾನು ತಾಯಿಯ ಮುಂದೆ ಬಂದು ನಿಂತು, ತನ್ನನ್ನು ಕೊಂದು, ತಾಯಿಯನ್ನು ಬಿಟ್ಟುಬಿಡು ಎಂದು ಆ ಚುಲ್ಲ ನಂದಿಯ ಸಹಾ ಪ್ರಾಥರ್ಿಸಿದನು. ಆದರೆ ಆ ಕಠೋರ ಹೃದಯಿ ಬೇಟೆಗಾರ ಆ ಚುಲ್ಲನಂದಿಯನ್ನು ಬಾಣದಿಂದ ಸಂಹರಿಸಿ, ಕೊನೆಗೆ ಆ ತಾಯಿಯನ್ನು ಸಂಹರಿಸಿ ಮನೆ ಕಡೆಗೆ ಹೊರಟನು.
ಆದರೆ ದಾರಿಯಲ್ಲಿ ಯಾರೋ ಆತನಿಗೆ ಹೀಗೆ ಹೇಳಿದರು: ಓ ಬೇಟೆಗಾರ, ನಿನ್ನ ಮನೆಗೆ ಸಿಡಿಲು ಬಡಿದು, ನಿನ್ನ ಪತ್ನಿ ಪುತ್ರರು ಮೃತರಾಗಿದ್ದಾರೆ. ಇದನ್ನು ಕೇಳಿ ಅತ್ಯಂತ ದುಃಖದಿಂದ ಆತನು ಮನೆಗೆ ಓಡಿಬಂದನು. ಆಗ ಶಿಥಿಲವಸ್ಥೆಯಿಂದಿದ್ದ ಕಂಬವೊಂದು ಆತನ ತಲೆಗೆ ಬಿದ್ದು ಪೆಟ್ಟಾಗಿ ನೆಲಕ್ಕೆಬಿದ್ದನು. ಭೂಮಿಯು ಸಹಾ ಕಂಪಿಸಿ ಸೀಳಿ, ಆತನು ಭೂಗರ್ಭದಲ್ಲಿ ಬಿದ್ದನು. ಬೆಂಕಿಯ ಕೆನ್ನಾಲಿಗೆ ಆತನನ್ನು ಸೆಳೆದುಕೊಂಡು ಒಳಹೋಯಿತು.

ಛದ್ದಂತ ಬೋಧಿಸತ್ವರ ಅಂಗದಾನ

ಛದ್ದಂತ ಬೋಧಿಸತ್ವರ ಅಂಗದಾನ

ಬಹುಕಾಲದ ಹಿಂದೆ ಹಿಮಾಲಯ ಪ್ರಾಂತ್ಯದಲ್ಲಿರುವ ಸರೋವರದ ಬಳಿ ಎಂಬತ್ತು ಸಾವಿರ ಆನೆಗಳು ವಾಸವಾಗಿದ್ದವು. ಆ ಆನೆಗಳಿಗೆ ನಾಯಕರಾಗಿದ್ದವರೇ ಛದ್ದಂತ ಬೋಧಿಸತ್ವರು. ಈ ಛದ್ದಂತ ಆನೆಗೆ ತನ್ನ ಪೂರ್ವ ಜನ್ಮದ ಫಲದಿಂದಾಗಿ ಸುಂದರವಾದ ದಂತಗಳಿದ್ದು ಅದರಿಂದಾಗಿ ಸದಾ ಆರು ಬಣ್ಣದ ಪ್ರಬೆಯು ಹೊರಹೊಮ್ಮುತ್ತಿತ್ತು. ಈ ಕಾರಣದಿಂದಾಗಿ ಅದಕ್ಕೆ ಛದ್ದಂತ (ಆರು ವರ್ಣಗಳ ದಂತ) ಎನ್ನಲಾಗುತ್ತಿತ್ತು. ಈ ಆನೆಯ ದಾನಶೀಲಾದಿ ಸದ್ಗುಣಗಳಿಂದ ಕೂಡಿತ್ತು. ಹಿಮಾಲಯದಲ್ಲೇ ವಾಸವಾಗಿದ್ದ ಪಚ್ಚೇಕ ಬುದ್ಧರ ಸೇವೆಯನ್ನು ಮಾಡುತ್ತಿತ್ತು.
ಒಂದುದಿನ ಎಂದಿನಂತೆ ಆನೆಯು ಕಾಡಿನಲ್ಲಿ ಹೊರಟಿರಬೇಕಾದರೆ ಆ ಆನೆಗೆ ಹೊಂಚುಹಾಕುತ್ತಿದ್ದ ಕಾಷಾಯ ವಸ್ತ್ರದ ಬೇಟೆಗಾರನು ಅತ್ಯಂತ ಉಪಾಯದಿಂದಾಗಿ ಪ್ರಬಲವಾದ ಬಾಣದಿಂದಾಗಿ ಆನೆಗೆ ಗುರಿಯಿಟ್ಟು ಬಿಟ್ಟನು. ಹೀಗೆ ಬಾಣದಿಂದ ಸೀಳಲ್ಪಟ್ಟ ಆನೆಯು ನೋವಿನಿಂದ ಜೋರಾದ ಶಬ್ದದಿಂದ ನರಳಿತು. ಆ ಶಬ್ದಕ್ಕೆ ಹೆದರಿ ಉಳಿದ ಆನೆಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಗಾಯಗೊಂಡ ಆನೆಗೆ ಕೋಪವುಂಟಾಗಿ ಬಾಣ ಬಿಟ್ಟಂತಹ ವ್ಯಕ್ತಿಯತ್ತ ನುಗ್ಗಿತು. ಆದರೆ ಆತನು ಧರಿಸಿದ ಕಾಷಾಯ ವಸ್ತ್ರವನ್ನು ನೋಡಿ ಓಹ್ ಇದು ಪವಿತ್ರ ವ್ಯಕ್ತಿಗಳು ಧರಿಸುವಂತಹ ವಸ್ತ್ರಗಳಾಗಿವೆ. ಇದನ್ನು ಧರಿಸಿರುವಂತಹವರನ್ನು ಕೊಲ್ಲುವುದು ಸರಿಯಲ್ಲ. ಸಂಯಮ ಸತ್ಯ ಮತ್ತು ಅಹಿಂಸೆಯಿಲ್ಲದವರು ಈ ಕಾಷಾಯ ವಸ್ತ್ರ ಧರಿಸಿಯು ಅದಕ್ಕೆ ಯೋಗ್ಯರಾಗಿರುವುದಿಲ್ಲ. ಆದರೂ ಈ ವಸ್ತ್ರಕ್ಕೆ ಗೌರವಕ್ಕಾದರೂ ನಾನು ಹಿಂಸಿಸಬಾರದು ಎಂದು ನಿರ್ಧರಿಸಿತು. ಮತ್ತು ಹಿಂದಿನ ಜನ್ಮ ಸತ್ಯ ಪಾಲನೆಯಿಂದಾಗಿ ಅದಕ್ಕೆ ಮಾನವ ಭಾಷೆಯಲ್ಲಿ ಮಾತನಾಡುವ ಸಾಮಥ್ರ್ಯವಿತ್ತು. ಅದು ಬೇಟೆಗಾರನಿಗೆ ತನ್ನನ್ನು ಏಕೆ ಕೊಲ್ಲಲು ಬಂದಿದ್ದೀಯೆ ಎಂದು ವಿಚಾರಿಸಿತು. ಅದಕ್ಕೆ ಆ ಬೇಟೆಗಾರನು ಓ ಮಹಾ ಆನೆಯೇ, ಕಾಶಿ ರಾಜ್ಯದ ರಾಣಿಯಾದ ಸುಭದ್ರೆಗೆ ನಿನ್ನ ದಂತಗಳು ಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾಳೆ ಎಂದನು.
ಆಗ ಬೋಧಿಸತ್ವರಿಗೆ ಎಲ್ಲವೂ ಕ್ಷಣಮಾತ್ರದಲ್ಲಿ ಅರ್ಥವಾಯಿತು. ಆ ಕಾಶಿ ರಾಣಿಯು  ತಾನು ಹುಟ್ಟುವ ಮುನ್ನ ಇದೇ ಛದ್ದಂತ ಆನೆಗೆ ಎರಡನೆಯ ಪತ್ನಿಯಾಗಿತ್ತು. ಛದ್ದಂತರು ಎರಡು ಹೆಣ್ಣು ಆನೆಗಳಿಗೂ ಸಮಾನವಾಗಿ ನೋಡಿಕೊಂಡರೂ ಸಹಾ ವಿನಾಕಾರಣ ಸಂಶಯದಿಂದಾಗಿ ಕಿರಿಯ ಪತ್ನಿಯು ಸವತಿ ಮಾತ್ಸರ್ಯದಿಂದಾಗಿ ಛದ್ದಂತವನ್ನು ದ್ವೇಷಿಸಿ, ಸತ್ತು ಪುನರ್ಜನ್ಮ ತಾಳಿ ಸೇಡು ತೀರಿಸುವಷ್ಟು ಕೋಪವುಂಟಾಗಿ, ಪಚ್ಚೇಕ ಬುದ್ಧರಿಗೆ ಹಣ್ಣು ಹಂಪಲುಗಳನ್ನು ನೀಡುವಾಗ ಬೋಧಿಸತ್ವರು ಬುದ್ಧತ್ವವನ್ನು ಅಶಿಸಿದರೆ, ಆ ಹೆಣ್ಣು ಆನೆಯು ಸತ್ತು ಸೇಡುತೀರಿಸಿಕೊಳ್ಳಲು ಕಾಶಿ ರಾಣಿಯಾಗಿ ಹುಟ್ಟಬೇಕು ಎಂದು ಸಂಕಲ್ಪಿಸಿದಳು ಮತ್ತು ಆಗ ಈ ಜನ್ಮದ ನೆನಪಿರಬೇಕೆಂದು ಆಶಿಸಿದಳು. ನಂತರ ಆ ಹೆಣ್ಣಾನೆಯು ನಿರಾಹಾರಿಯಾಗಿ ಸತ್ತಿತ್ತು. ಇದೆಲ್ಲವನ್ನೂ ನೆನಪಿಸಿಕೊಂಡ ಬೋಧಿಸತ್ವರಿಗೆ ಸ್ಪಷ್ಟವಾಗಿ ಇದು ಕಿರಿಯ ಪತ್ನಿಯ ಕೆಲಸವೆಂದು ಅರ್ಥವಾಗಿ ಓಹ್ ಬೇಟೆಗಾರನೇ, ಆಕೆಗೆ ದಂತಗಳು ಬೇಕಿಲ್ಲ. ನನ್ನ ವಧೆ ಮಾಡಲೆಂದೇ ಆಕೆ ನಿನಗೆ ಕಳುಹಿಸಿದ್ದಾಳೆ. ಆದರೂ ನಾನು ನಿನಗೆ ಸಾಯುವ ಮುನ್ನ ನನ್ನ ದಂತಗಳನ್ನು ದಾನವಾಗಿ ನೀಡಲು ಇಚ್ಛಿಸುತ್ತಿದ್ದೇನೆ ಕೊಯ್ದುಕೋ ಎಂದಿತು.
ಆದರೆ ಬಲಿಷ್ಠವಾದ ಆನೆಯ ದಂತ ಕೊಯ್ಯಲು ಆ ಬಲಿಷ್ಠ ಬೇಟೆಗಾರನ ಕೈಯಲ್ಲೂ ಆಗಲಿಲ್ಲ. ಆದರೆ ಆಗ ದಮಾಮಯಿಯಾದ ಆ ಛದ್ದಂತ ಆನೆಯೇ ಅದಕ್ಕೆ ಕೊಯ್ಯಲು ಸಹಾಯ ಮಾಡಿತು ತಾನು ನೋವಿನಿಂದ ನರಳುತ್ತಿದ್ದರೂ ಸಹಾ ತನ್ನ ಪ್ರಿಯವಾದ ಪ್ರಭಾವಳಿ ಬೀರುತ್ತಿದ್ದ ದಂತಗಳನ್ನು ಕತ್ತರಿಸಿ ನೀಡಿತು. ಹಾಗು ಆ ದಾನದ ಪ್ರತಿಫಲವಾಗಿ ಬುದ್ಧತ್ವ ಆಶಿಸಿತು. ನಂತರ ಹಾಗೆಯೇ ಆತನನ್ನು ಕಳುಹಿಸಿಕೊಟ್ಟು ಅದು ಮಡಿಯಿತು. ಆನಂತರ ಉಳಿದ ಆನೆಗಳು ಮತ್ತು ಪಚ್ಚೇಕ ಬುದ್ಧರೆಲ್ಲ ಅಲ್ಲಿಗೆ ಬಂದರು. ನಂತರ ಗೌರವ ಆದರಗಳಿಂದ ಅದಕ್ಕೆ ಶವಸಂಸ್ಕಾರ ಮಾಡಿದರು.
ಇತ್ತ ಬೇಟೆಗಾರನು ಆ ದಂತಗಳನ್ನು ಕಾಶಿ ರಾಣಿಗೆ ನೀಡಿದನು. ಆ ದಂತಗಳನ್ನು ನೋಡುತ್ತಲೇ ಆಕೆಗೆ ತನ್ನ ಪೂರ್ವ ಜನ್ಮದ ಪೂರ್ಣ ವಿವರಗಳು ಜ್ಞಾಪಕಕ್ಕೆ ಬಂದವು. ಆಗ ಆಕೆಗೆ ಬೋಧಿಸತ್ವರ ಮಹಾಸದ್ಗುಣಗಳು, ಅದರ ಪ್ರೇಮ ಎಲ್ಲವೂ ನೆನಪಿಗೆ ಬಂದಿತು. ತನ್ನ ಮೂರ್ಖತ್ವವೂ ಆಕೆಯ ಅರಿವಿಗೆ ಬಂದು ಇಂತಹ ಪುಣ್ಯಶಾಲಿ ಶ್ರೇಷ್ಠ ಆನೆಯನ್ನು ಕೊಲ್ಲಿಸಿದೆನಲ್ಲಾ ಎಂದು ಅಪಾರ ದುಃಖದಿಂದ ಎದೆಬಡಿದು ಅದೇದಿನ ಸತ್ತಳು.

ಶತ್ರುವಿಗೂ ಅಭಯದಾನ ನೀಡಿದ ಭೋಧಿಸತ್ವ

ಶತ್ರುವಿಗೂ ಅಭಯದಾನ ನೀಡಿದ ಭೋಧಿಸತ್ವ

ಬಹುಕಾಲದ ಹಿಂದೆ ಬೋಧಿಸತ್ವರು ವಾರಣಾಸಿಯ ಪಕ್ಕದ ಕಾಡಿನಲ್ಲಿ ವಾನರರಾಗಿ ಜನ್ಮ ತಾಳಿ ಅಲ್ಲಿ ವಾಸವಾಗಿದ್ದರು. ಪುಣ್ಯವಂತರಾಗಿದ್ದರಿಂದಾಗಿ ಬೃಹತ್ ಶರೀರವನ್ನು ಹೊಂದಿದ್ದರು. ಹಾಗೆಯೇ ಕೋಮಲ ಹೃದಯಿಯೂ ಆಗಿದ್ದರು. ಜೊತೆಗೆ ಪ್ರಜ್ಞಾವಂತರೂ ಸಹಾ ಆಗಿದ್ದರು.
ಒಂದುದಿನ ಕಾಶಿ ಗ್ರಾಮದ ಕೃಷಿಕನೊಬ್ಬನು ತನ್ನ ಕಾಣೆಯಾದ ಎತ್ತುಗಳನ್ನು ಹುಡುಕುತ್ತಾ ಕಾಡಿನಲ್ಲಿ ಪ್ರವೇಶಿಸಿದನು. ಅವು ಸಿಗದೆ, ಇತ್ತ ಹಸಿವಿನಿಂದ ಕಂಗೆಟ್ಟು ಆತನು ತಿಂದುಕವೃಕ್ಷವೇರಿ ಹಣ್ಣುಗಳನ್ನು ತಿನ್ನುತ್ತಿದಾಗ ಕಾಲುಜಾರಿ ಆಳವಾದ ಪ್ರಪಾತಕ್ಕೆ ಬಿದ್ದುಬಿಟ್ಟನು. ಅಲ್ಲಿ ಸ್ವಲ್ಪ ನೀರಿದ್ದರಿಂದಾಗಿ ಆತನ ಜೀವ ಉಳಿಯಿತು. ಆದರೂ ಅಲ್ಲಿಂದ ಹೊರಬರಲಾರದೆ ಅಲ್ಲೇ 10 ದಿನಗಳು ಕಾಲ ಕಳೆದುಬಿಟ್ಟನು. ಆತನು ಅಳುತ್ತಾ ಪ್ರಲಾಪಿಸುತ್ತಿದ್ದನು. ಆತನ ಧ್ವನಿಯು ಬೋಧಿಸತ್ವರಿಗೆ ಕೇಳಿಸಿತು. ಅವರು ಕಲ್ಲುಗಳನ್ನು ಇನ್ನೊಂದು ಬದಿಗೆ ಎಸೆಯುತ್ತ ಮೆಟ್ಟಿಲು ರೀತಿ ಮಾಡಿ ಆ ಕೃಷಿಕನಿಗೆ ಹೊರಬರುವಂತೆ ಸನ್ನೇ ಮಾಡಿದರು. ಆದರೆ ಹತ್ತು ದಿನದಿಂದ ಆಹಾರವಿಲ್ಲದೆ ದುರ್ಬಲವಾಗಿದ್ದ ಆತನಿಗೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಬೋಧಿಸತ್ವರೇ ಸ್ವತಃ ಆ ಪ್ರಪಾತದಲ್ಲಿ ಗಿರಿಗಹ್ವರದಲ್ಲಿ ಇಳಿದರು. ಹಾಗು ಆತನನ್ನು ಬೆನ್ನಮೇಲೆ ಕುಳ್ಳರಿಸಿಕೊಂಡು ಆ ಗಿರಿಗಹ್ವರದಿಂದ ಬಹಳ ಕಷ್ಪಟ್ಟು ಮೇಲಕ್ಕೆ ತಂದರು. ತುಂಬಾ ದಣಿದ್ದುದ್ದರಿಂದಾಗಿ ಅದು ಸ್ವಲ್ಪಕಾಲ ವಿಶ್ರಾಂತಿ ಬಯಸಿತು. ಹಾಗೆಯೇ ಕಣ್ಣುಮುಚ್ಚಿ ಮಲಗಿತು.
ಈಗ ಆ ಕೃಷಿಕನಿಗೆ ಪಾಪಯೋಚನೆಗಳು ಉಂಟಾಯಿತು. ಅದು ಏನೆಂದರೆ ಹಸಿದಿದ್ದ ಆತನಿಗೆ ಈ ಮಹಾಕಪಿಯು ಉತ್ತಮ ಆಹಾರವೆಂದು ಆತನು ಭಾವಿಸಿ, ತನಗಾಗಿ ಜೀವವನ್ನು ಒತ್ತೆಯಿಟ್ಟು ಪ್ರಾಣ ಉಳಿಸಿದ ವಾನರನನ್ನೇ ಕೊಲ್ಲಲು ನಿರ್ಧರಿಸಿದನು. ಅದಕ್ಕಾಗಿ ಆತನು ದೊಡ್ಡ ಕಲ್ಲನ್ನು ಎತ್ತಿ ಮಹಾಕಪಿಯ ತಲೆಯ ಮೇಲೆ ಹಾಕಲು ಪ್ರಯತ್ನಿಸಿದನು. ಆದರೆ ದುರ್ಬಲನಾಗಿದ್ದರಿಂದಾಗಿ ಅದು ಪೂರ್ಣ ತಲೆಗೆ ಬೀಳದೆ ಕೇವಲ ತಲೆಗೆ ದೊಡ್ಡ ಗಾಯವಾಯಿತು, ರಕ್ತ ಹರಿಯತೊಡಗಿತು.
ಎಚ್ಚೆತ್ತ ಮಹಾಕಪಿಗೆ ಆಶ್ಚರ್ಯವಾಯಿತು. ಉಪಕಾರಿಗೆ ಹತ್ಯೆ ಮಾಡಲು ಬಯಸುತ್ತಾನಲ್ಲ ಎಂದು ಯೋಚಿಸಿತು. ಅದಕ್ಕೆ ತಲೆಗೆ ತೀವ್ರ ಪೆಟ್ಟಾಗಿ ನೋವು ಆವರಿಸುತ್ತಿದ್ದರೂ ಸಹಾ ಆ ಕೃಷಿಕನ ಒಳಿತನ್ನೇ ಚಿಂತಿಸಿತು. ಆಗ ಅದು ಆತನಿಗೆ ಹೀಗೆ ಹೇಳಿತು ಅಯ್ಯಾ, ನನ್ನ ಬಗ್ಗೆ ಹೀಗೆ ನೀನು ಮಾಡಬಾರದಿತ್ತು, ಏಕೆ ಹೀಗೆ ಮಾಡಿದೆ? ನಿನ್ನ ಪ್ರಾಣ ಉಳಿಸಿದ್ದಕ್ಕಾಗಿ ನನ್ನ ಪ್ರಾಣವನ್ನು ತೆಗೆಯಲು ಏಕೆ ಹೊರಟೆ? ಓಹ್! ಇದು ಪಾಪಕರ್ಮ, ಇದರ ಫಲವು ನಿನಗೆ ಸಿಗದಿರಲಿ, ಈ ನಿನ್ನ ಕೃತ್ಯದಿಂದ ನೀನು ದೀರ್ಘಕಾಲ ದುಃಖದಿಂದ ನರಳದಿರಲಿ, ನೀನು ಸುಖಿಯಾಗಿರು ಎಂದಿತು.
ಆಗ ಕೃಷಿಕನು ಕ್ಷಮೆಯಾಚಿಸಿದನು ಮತ್ತು ತಾನು ನಗರಕ್ಕೆ ಹೋಗಲು ಮಾರ್ಗವನ್ನು ಕೇಳಿದನು. ಆತನಿಗೆ ಕಾಡಿನ ಮಾರ್ಗ ತಿಳಿದಿರಲಿಲ್ಲ.
ಅದಕ್ಕೆ ಆ ಮಹಾಕಪಿಯು ಹೀಗೆ ಉತ್ತರಿಸಿತು: ಓ ಅಸಂಯಮಿ, ನಿನ್ನ ಮೇಲೆ ನನಗೆ ನಂಬಿಕೆಯಿಲ್ಲ. ಆದರೂ ನಿನಗೆ ಸಹಾಯ ಮಡುವೆ, ನಾನು ಕೊಂಬೆಯಿಂದ ಕೊಂಬೆಗೆ ಹಾರುತ್ತಿರುತ್ತೇನೆ, ನನ್ನ ರಕ್ತದ ಬಿಂದುಗಳು ನೆಲದ ಮೇಲೆ ಬೀಳುತ್ತಿರುತ್ತವೆ. ಅವನ್ನೇ ಹಿಂಬಾಲಿಸುತ್ತ ನೀನು ನಗರವನ್ನು ಸೇರುವಂತಾಗು ಎಂದಿತು.
ಹಾಗೆಯೇ ಅದು ಹಾರುವಾಗ ನೋಡುತ್ತ, ಅದರ ರಕ್ತದ ಬಿಂದುಗಳನ್ನು ಹಿಂಬಾಲಿಸುತ್ತ ಆ ಕೃಷಿಕನು ನಗರ ಸೇರಿದನು.
ಆದರೆ ತನ್ನ ಹೀನ ಕರ್ಮದಿಂದಾಗಿ ಆತನಿಗೆ ಕುಷ್ಟರೋಗ ಉಂಟಾಯಿತು. ಅಸಹ್ಯಕರ ಹುಣ್ಣುಗಳಿಂದ ದುವರ್ಾಸನೆಯಿಂದ ಕೂಡಿದ ದೇಹದಿಂದ ಆತನು ಕೂಡಿಕೊಂಡನು. ಜನರು ಆತನಿಗೆ ಕಲ್ಲೆಸೆದು ದೂರ ಓಡಿಸಿದರು.
ಓ ಉಪಕಾರಕ್ಕೆ ಅಪಕಾರ ಬೇಡ, ಪ್ರಾಣ ಉಳಿಸಿದವನಿಗೆ ಪ್ರಾಣ ತೆಗೆಯುವ ಯೋಚನೆ ಸಹಾ ಬೇಡ. ಮಿತ್ರದ್ರೋಹ ಮಾಡಿದವನಿಗೆ ಕುಷ್ಟರೋಗ ಉಂಟಾಗುತ್ತದೆ ಹಾಗು ಸತ್ತನಂತರ ನರಕಪ್ರಾಪ್ತಿ ಎಂದು ತನ್ನ ಬಗ್ಗೆ ಕೇಳಿದವರಿಗೆ ಆತನು ಹೇಳುತ್ತಿದ್ದನು.

ನರಭಕ್ಷಕನನ್ನು ಪರಿವರ್ತನೆಗೊಳಿಸಿದ ಬೋಧಿಸತ್ವ ಅಲೀನ ಶತ್ರುಕುಮಾರ

 ನರಭಕ್ಷಕನನ್ನು ಪರಿವರ್ತನೆಗೊಳಿಸಿದ ಬೋಧಿಸತ್ವ ಅಲೀನ ಶತ್ರುಕುಮಾರ


ಬಹುಕಾಲದ ಹಿಂದೆ ಬೋಧಿಸತ್ವರು ಕಾಂಪಿಲ್ಯ ರಾಜ್ಯದಲ್ಲಿ ಜಯದ್ದಿಸ ರಾಜನಿಗೆ ಮಗನಾಗಿ ಹುಟ್ಟಿದ್ದರು. ಬಾಲ್ಯದಿಂದಲೂ ಅವರು ಮೇಧಾವಿಯು ಮತ್ತು ಧೈರ್ಯಶಾಲಿಯೂ ಆಗಿದ್ದರು.
ಒಂದುದಿನ ಜಯದ್ದಿಸ ಮಹಾರಾಜರು ಬೇಟೆಗೆಂದು ಹೊರಟಿದ್ದರು. ಅಲ್ಲಿ ಬಣ್ಣದ ಮೃಗವನ್ನು ಬೇಟೆಯಾಡಿ ಹಿಂತಿರುಗುವಾಗ ಮರದ ಆಶ್ರಯ ಪಡೆದರು. ಅಲ್ಲಿ ನರಭಕ್ಷಕನೊಬ್ಬ ಇದ್ದನು. ಆತನು ಬಲಶಾಲಿಯು, ವಿಕೃತನು, ಭಯಾನಕವಾಗಿ ಕಾಣುತ್ತಿದ್ದನು. ಆತನು ರಾಜನನ್ನು ತಿನ್ನಲು ಹಿಡಿದುಬಿಟ್ಟನು. ಆತನನ್ನು ಕಂಡೊಡನೆ ಭೀತಿಗೊಂಡ ರಾಜನು ನಿಶ್ಶಕ್ತನಾದನು. ಆದರೂ ಧೈರ್ಯ ತೆಗೆದುಕೊಂಡು, ತಾನು ಬೇಟೆಯಾಡಿದ ಮೃಗ ಆ ನರಭಕ್ಷಕನಿಗೆ ಒಪ್ಪಿಸಿ, ಖಂಡಿತ ಹಿಂತಿರುಗಿ ಬರುವೆ ಎಂದು ವಚನ ನೀಡಿ ರಾಜ್ಯಕ್ಕೆ ಹಿಂತಿರುಗಿದನು.
ನಂತರ ಅಲೀನ ಶತ್ರುಕುಮಾರನಿಗೆ (ಬೋಧಿಸತ್ವನಿಗೆ) ರಾಜನನ್ನಾಗಿ ಮಾಡಲು ನಿರ್ಧರಿಸಿದನು. ಅದಕ್ಕಾಗಿ ಸಿದ್ಧತೆ ನಡೆಸಿದನು. ಆದರೆ ಬೋಧಿಸತ್ವ ಇದಕ್ಕೆಲ್ಲಾ ಕಾರಣ ತಿಳಿದುಕೊಂಡರು. ಹಾಗು ತಾವೇ ಆ ನರಭಕ್ಷಕನ ಬಳಿಗೆ ಹೋಗಲು ನಿರ್ಧರಿಸಿದರು. ತಂದೆ-ತಾಯಿಯು ವಿರೋಧಿಸಿದರು. ಆದರೂ ಅವರಿಗೆಲ್ಲಾ ಸಾಂತ್ವನ ಮಾಡಿ, ಧೈರ್ಯತುಂಬಿ ಅವರಿಂದ ಅಪ್ಪಣೆ ಪಡೆದು ಆ ನರಭಕ್ಷಕನ ಬಳಿಗೆ ಬರುತ್ತಾರೆ. ಅಲ್ಲಿಯ ನರಭಕ್ಷಕನನ್ನು ಕಂಡರೂ ಹೆದರದೆ ನನ್ನ ತಂದೆಯ ಬದಲು ನನ್ನನ್ನೇ ತಿಂದುಬಿಡು ಎಂದರು.
ಬೋಧಿಸತ್ವರ ಧೈರ್ಯ ಮತ್ತು ಸ್ವಭಾವ ಕಂಡು ಆ ನರಭಕ್ಷಕನಿಗೆ ಆಶ್ಚರ್ಯವಾಯಿತು. ಏಕೆಂದರೆ ಜೀವನದಲ್ಲಿ ಪ್ರಥಮಬಾರಿ ಆತನನ್ನು ಕಂಡು ಹೆದರದೆ ಮಾತನಾಡಿಸುವವರನ್ನು ಕಂಡನು. ಹಾಗೆಯೇ ತಂದೆಗಾಗಿ ಪ್ರಾಣ ನೀಡಲು ಸಂತೋಷವಾಗಿ ಮುಂದೆ ಬಂದಿರುವುದನ್ನು ಕಂಡು ಆಶ್ಚರ್ಯಪಟ್ಟನು. ಸಂತೋಷವಾಗಿ ತಿನ್ನು ಎಂದು ಹೇಳುವಾಗ ಆತನ ದಾನ ಸ್ವಭಾವ ಕಂಡು, ನರಭಕ್ಷಕನ ಮನಸ್ಸು ಪರಿವರ್ತನೆ ಹೊಂದಿತು. ಆತನು ಆ ಬಾಲಕನಿಗೆ ಹಾಗೇ ಕಳುಹಿಸಿಕೊಡಲು ನಿರ್ಧರಿಸಿ, ಅದರಂತೆ ಋಣಮುಕ್ತನಾಗಿರುವೆ ನಿನ್ನನ್ನು ತಿನ್ನಲಾರೆ ನೀನು ಹೊರಡು ಎಂದನು.
ಆಗ ಅಲೀನ ಶತ್ರುಕುಮಾರನು ನರಭಕ್ಷಕನನ್ನು ಸೂಕ್ಷ್ಮವಾಗಿ ವಿಶ್ಲೇಷಣೆಯಿಂದ ಗಮನಿಸಿ ಹೀಗೆ ಹೇಳುತ್ತಾರೆ: ನೀನು ಯಕ್ಷನಲ್ಲ, ಸ್ವತಃ ನನ್ನ ದೊಡ್ಡಪ್ಪನಾಗಿರುವೆ. ಏಕೆಂದರೆ ನಿನಗೂ ನನ್ನ ತಂದೆಗೂ ಮುಖ ಲಕ್ಷಣದಲ್ಲಿ ಹೋಲಿಕೆಯಿದೆ ಮತ್ತು ನೀನು ಚಿಕ್ಕವನಿರುವಾಗ ಯಕ್ಷಿಣಿಯೊಬ್ಬಳು ತಿನ್ನಲೆಂದು ನಿನ್ನನ್ನು ಎತ್ತಿಕೊಂಡು ಹೋಗಿದ್ದಳು. ಪುನಃ ಅವಳೇ ನಿನ್ನನ್ನು ವಾತ್ಸಲ್ಯದಿಂದ ಹಾಗೆ ಮಾಡದೆ, ನಿನ್ನನ್ನು ಕಾಪಾಡಿ ಬೆಳೆಸಿದ್ದಾಳೆ. ನನ್ನ ಜೊತೆ ರಾಜ್ಯಕ್ಕೆ ಬಾ, ನಿನ್ನನ್ನು ರಾಜನನ್ನಾಗಿಸುವೆ ಎಂದರು. ಆದರೆ ನರಭಕ್ಷಕನು ಇದನ್ನು ನಂಬಲಿಲ್ಲ. ಆದರೆ ಹತ್ತಿರದಲ್ಲೇ ವಾಸವಾಗಿದ್ದ ದಿವ್ಯಚಕ್ಷು ಸಾಧಿಸಿದ ಋಷಿಯ ಬಳಿಗೆ ಬಂದು ಈ ಬಗ್ಗೆ ವಿಚಾರಿಸಿದಾಗ ಅಲೀನಕುಮಾರ ಹೇಳಿದ್ದು ಅಕ್ಷರಶಃ ನಿಜವೆಂದು ಆ ಋಷಿಯು ಆ ಇಬ್ಬರಿಗೆ ಮಾತ್ರ ತಿಳಿದಂತಹ ಸಂಗತಿಗಳನ್ನು ಹೇಳಿ ಅವರಲ್ಲಿ ನಂಬಿಕೆ ತರಿಸಿ ಒಪ್ಪಿಸಿದರು. ಈಗ ಪುನಃ ಅಲೀನಕುಮಾರರು ನರಭಕ್ಷಕನಿಗೆ ರಾಜ್ಯಕ್ಕೆ ಮರಳಿ ಬರುವಂತೆ ಕೇಳಿಕೊಂಡರು. ಆದರೆ ಅದಕ್ಕೆ ಆತನು ಒಪ್ಪದೆ, ಋಷಿಯ ಬಳಿ ಪ್ರವಜ್ಯ ಸ್ವೀಕರಿಸಿ, ಶೀಲವಂತಿಕೆ ಜೀವನ ನಡೆಸಿದನು. ಅಲೀನಕುಮಾರರು ರಾಜ್ಯಕ್ಕೆ ಮರಳಿ ವಿಷಯವನ್ನು ತಿಳಿಸಿದರು.

ಬೋಧಿಸತ್ವ ಋರು ನೀಡಿದ ಅಭಯದಾನ

ಬೋಧಿಸತ್ವ ಋರು ನೀಡಿದ ಅಭಯದಾನ

ಬಹುಕಾಲದ ಹಿಂದೆ ಬೋಧಿಸತ್ವರು ಋರು ಎಂಬ ಜಿಂಕೆಯಾಗಿ ಹುಟ್ಟಿದರು. ಅವರ ಹಿಂದಿನ ಜನ್ಮದ ಪುಣ್ಯದಿಂದಾಗಿ, ಅವರ ಚರ್ಮವು ಚಿನ್ನದ ಬಣ್ಣವನ್ನು ಹೊಂದಿದ್ದು, ಬೇರೆ ಜಿಂಕೆಗಳಿಗಿಂತ ಅತ್ಯಂತ ಸುಂದರಾಕೃತಿಯನ್ನು ಹೊಂದಿತ್ತು. ಹಿಂದಿನ ಜನ್ಮದ ಸತ್ಯಾಚರಣೆಯಿಂದಾಗಿ, ಅದು ಮಾನವರಂತೆ ಮಾತನಾಡುತ್ತಿತ್ತು. ತನ್ನ ಸೌಂದರ್ಯದಿಂದಲೇ ತನಗೆ ಹಾನಿಯಾಗುವುದೆಂದು ಅದು ಶಾಲ ಮತ್ತು ಮಾವಿನ ತೋಪುಗಳಿಂದ ಕೂಡಿದ ಏಕಾಂತ ಸ್ಥಳದಲ್ಲಿ ಏಕಾಂಗಿಯಾಗಿ ವಾಸವಾಗಿತ್ತು.
ಒಂದುದಿನ ಅದು ಗಂಗೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಂತಹ ಮಾನವನನ್ನು ತನ್ನ ಅಸೀಮ ಶಕ್ತಿಯಿಂದ ಕಾಪಾಡಿತು. ಆ ಮಾನವನಿಗೆ ಹಣ್ಣು ಹಂಪಲುಗಳನ್ನು ನೀಡಿ ಸತ್ಕರಿಸಿತು. ನಂತರ ಆತನೊಂದಿಗೆ ಹೀಗೆ ಹೇಳಿತು: ಓ ಮನುಷ್ಯನೇ, ನಿನಗೆ ವಾರಾಣಸಿಯ ದಾರಿಯವರೆಗೆ ಬಿಡುತ್ತೇನೆ, ನೀನು ಸುಖಿಯಾಗಿ ಹೋಗು. ಆದರೆ ದುರಾಸೆಗೆ ವಶವಾಗಿ ಸ್ವರ್ಣಮೃಗವಾದ ನಾನು ವಾಸಿಸುವ ಸ್ಥಳದ ಬಗ್ಗೆ ಹೇಳಬೇಡ ಎಂದು ವಚನ ಸ್ವೀಕರಿಸಿ ಕಳುಹಿಸಿಕೊಟ್ಟಿತು.
ಆದರೆ ಮಾರನೆಯದಿನ ವಾರಾಣಸಿಯ ಪಟ್ಟಮಹಿಷಿಯ ಸ್ವಪ್ನದಲ್ಲಿ ಸ್ವರ್ಣ ಜಿಂಕೆಯೊಂದು ಆಕೆಗೆ ಧಮ್ಮೋಪದೇಶ ನೀಡಿದಂತೆ ಕಂಡಳು. ಇದರಿಂದ ಉತ್ತೇಜಿತಳಾದ ಆಕೆಯು ಅಂತಹ ಜಿಂಕೆಯನ್ನು ನಾನು ಕಾಣದಿದ್ದರೆ ನಾನು ಬದುಕಲಾರೆ ಎಂದು ಹಠಹಿಡಿದಳು. ಆಕೆಗಾಗಿ ರಾಜನು ಯಾರು ಸ್ವರ್ಣ ಜಿಂಕೆಯ ಸುಳಿವನ್ನು ನೀಡುವರೋ ಅವರಿಗೆ ಸಾವಿರ ಚಿನ್ನದ ನಾಣ್ಯ, ಗ್ರಾಮ ಮತ್ತು ಸುಂದರ ನಾರಿಯನ್ನು ನೀಡುತ್ತೇನೆ ಎಂದು ಡಂಗೂರ ಸಾರಿದನು.
ಯಾವ ಮನುಷ್ಯನನ್ನು ಋರು ಸ್ವರ್ಣ ಮೃಗವು ಕಾಪಾಡಿತ್ತೋ ಆ ಕೃತಘ್ನ ಪುರುಷನು ಬಹುಮಾನದ ಆಸೆಯಿಂದ ಆ ಸ್ಥಳದ ಮಾಹಿತಿಯೆಲ್ಲಾ ರಾಜನಿಗೆ ನೀಡಿದನು.
ರಾಜನು ಆ ಸ್ಥಳಕ್ಕೆ ಬಂದು ಋರುವಿಗೆ ಬಾಣದಿಂದ ಗುರಿಯಿಟ್ಟನು. ತಕ್ಷಣವೇ ಋರು ಬೋಧಿಸತ್ವರು ಹೀಗೆಂದರು: ತಡೆ ರಾಜ, ಆತುರಬೇಡ, ನಾನು ಓಡಿಹೋಗುವುದಿಲ್ಲ. ಮೊದಲು ನನ್ನ ಪ್ರಶ್ನೆಗೆ ಉತ್ತರಿಸು, ನಾನು ಇಲ್ಲಿರುವುದು ಹೇಗೆ ತಿಳಿಯಿತು.
ರಾಜನಿಗೆ ಅದು ಮಾತನಾಡಿದ್ದು ಕಂಡು ಆಶ್ಚರ್ಯವಾಯಿತು. ಆತನ ಆ ಕೃತಘ್ನ ಪುರುಷನನ್ನು ತೋರಿಸಿದನು. ಸ್ವರ್ಣ ಮೃಗವು ಹೀಗೆ ನುಡಿಯಿತು: ಮುಳುಗುತ್ತಿರುವ ಮನುಷ್ಯನನ್ನು ಕಾಪಾಡುವ ಬದಲು, ಮುಳುಗುತ್ತಿರುವ ಮರದ ದಿಮ್ಮಿಯನ್ನು ಕಾಪಾಡುವುದು ಉತ್ತಮವೆಂದು ಜ್ಞಾನಿಗಳು ಹೇಳುವುದು ಸತ್ಯವೇ ಆಗಿದೆ ಎಂದಿತು.
ಅರ್ಥವಾಗದ ರಾಜನಿಗೆ ನಂತರ ವಿವರವಾಗಿ ತಾನು ಹೇಗೆ ಪ್ರವಾಹದಲ್ಲಿ ಸಿಲುಕಿದ್ದ ಆತನನ್ನು ಕಾಪಾಡಿದೆನು ಎಂದೆಲ್ಲಾ ತಿಳಿಸಿತು. ರಾಜನಿಗೆ ಕೋಪವುಂಟಾಗಿ ಆ ಕೃತಘ್ನನನ್ನು ಕೊಲ್ಲಲು ನಿರ್ಧರಿಸಿದನು. ಆದರೆ ಬೋಧಿಸತ್ವ ಋರು ಅದಕ್ಕೆ ತಡೆದು ಕ್ಷಮೆ ನೀಡುವಂತೆ  ಕೇಳಿಕೊಂಡು ಆ ಕೃತಘ್ನನಿಗೆ ಬಹುಮಾನವು ಸಿಗುವಂತೆ ಮಾಡಿತು.
ನಂತರ ರಾಣಿಯ ಸ್ವಪ್ನದಂತೆ ಆಕೆಗೆ ಧಮ್ಮೋಪದೇಶವನ್ನು ಮಾಡಿತು. ಬೋಧಿಸತ್ವ ಋರುವಿನ ಉಪದೇಶದಂತೆ ಅಂದಿನಿಂದ ರಾಜ್ಯದಲ್ಲೆಲ್ಲಾ ಯಾರು ಪಶು-ಪಕ್ಷಿಗಳಿಗೆ ಪ್ರಾಣ ತೆಗೆಯುವುದು ಮತ್ತು ಹಿಂಸೆ ಮಾಡುವುದನ್ನು ತ್ಯಜಿಸಿದರು. 

ಬೋಧಿಸತ್ತರ ಅಭಯದಾನ

 ಬೋಧಿಸತ್ತರ ಅಭಯದಾನ


ಬಹುಕಾಲದ ಹಿಂದೆ ಬೋಧಿಸತ್ತರು ವಾರಾಣಸಿಯಲ್ಲಿ ವಾನರರಾಗಿ ಹುಟ್ಟಿದರು. ನಂತರ ಅವರೇ ಆ ಕಪಿಗಳ ದಂಡಿಗೆ ನಾಯಕರೂ ಆದರು. ಅವರು ಹಿಮಾಲಯದ ಗಂಗಾತಟದಲ್ಲಿ ಬೃಹತ್ ಮಾವಿನ ಮರದಲ್ಲಿ ವಾಸವಾಗಿದ್ದರು. ಆ ಮಾವಿನ ಮರದ ಒಂದು ಭಾಗವು ಹರಿಯುತ್ತಿರುವ ಗಂಗಾನದಿಯ ಕಡೆಗಿತ್ತು. ಆ ಮಾವಿನ ಮರದ ಹಣ್ಣುಗಳು ನಿಜಕ್ಕೂ ಅದ್ಭುತವಾಗಿತ್ತು. ಅದರ ರುಚಿಗೆ ಮಾರುಹೋಗದವರೇ ಇರಲಿಲ್ಲ. ಆ ಕಪಿಗಳ ಗುಂಪು ಸಹಾ ಆ ಮಾವಿಗೆ ಆಕಷರ್ಿತರಾಗಿ ಅಲ್ಲೇ ನೆಲೆಸಿದ್ದವು. ಆ ಮರವು ನಾಗರಿಕ ಪ್ರಪಂಚದಿಂದ ದೂರವಾಗಿತ್ತು. ಹೀಗಾಗಿ ಆ ಮಾವು ಜನರ ಕಣ್ಣಿಗೆ ಬಿದ್ದಿರಲಿಲ್ಲ. ಬೋಧಿಸತ್ವರಿಗೆ ದೂರದೃಷ್ಟಿಯ ಪ್ರಜ್ಞೆಯಿದ್ದುದರಿಂದಾಗಿ ಅವರು ಆ ಮಾವು ಜನರ ಕಣ್ಣಿಗೆ ಬೀಳಬಾರದೆಂದು ಅವರು ಗಂಗಾನದಿಗೆ ವಾಲಿದ್ದ ಕೊಂಬೆಯಲ್ಲಿದ್ದ ಹೂವು, ಕಾಯಿ ಮತ್ತು ಹಣ್ಣುಗಳೆಲ್ಲವನ್ನೂ ನಾಶಪಡಿಸಿತ್ತು. ಹೀಗಾಗಿ ಎಂದಿಗೂ ಮಾವು ನೀರಿನಲ್ಲಿ ಹರಿದು ಜನರಿಗೆ ಸಿಕ್ಕಿರಲಿಲ್ಲ. ಆದರೂ ಒಮ್ಮೆ ಹೇಗೋ ಒಂದು ಮಾವು ಹರಿಯುತ್ತ, ಹರಿಯುತ್ತ, ಜಲಕ್ರೀಡೆಯಾಡುತ್ತಿದ್ದ ವಾರಾಣಸಿಯ ರಾಜನಿಗೆ ಸಿಕ್ಕಿತ್ತು. ಅದನ್ನು ಆತನು ತಿಂದನಂತರ ಆತನು ಅಪಾರ ರಸತೃಷ್ಣೆಗೆ ಒಳಗಾದನು. ಕಂಡಕಂಡವರೊಂದಿಗೆ ಈ ಹಣ್ಣಿನ ಬಗ್ಗೆ ವಿಚಾರಿಸಿದನು. ಆದರೆ ಆ ಹಣ್ಣಿನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಕೊನೆಗೆ ಒಬ್ಬ ಹಿಮಾಲಯದಲ್ಲಿ ವಾಸವಾಗಿ ಅಲ್ಲಿಂದ ವಲಸೆ ಬಂದಿದ್ದಂತಹ ಕಾಡು ಮನುಷ್ಯರಿಗೆ ವಿಚಾರಿಸಿದಾಗ ಆ ಮಾವಿನ ಹಣ್ಣು ಹಿಮಾಲಯ ಪ್ರಾಂತ್ಯದಲ್ಲಿ ಸಿಗುವುದೆಂದು ಮಾಹಿತಿ ಪಡೆದನು. ರಾಜನು ಕೂಡಲೇ ಪ್ರಯಾಣ ಆರಂಭಿಸಿ ಆ ಸ್ಥಳವನ್ನು ಸಹಾ ಹುಡುಕಿ, ರಾಜ ಮತ್ತು ಆತನ ಸೈನ್ಯವು ಅಲ್ಲಿ ಬೀಡುಬಿಟ್ಟು ಹೊಟ್ಟೆ ತುಂಬಾ ಮಾವು ತಿಂದು ಅಲ್ಲೇ ಮಲಗಿದರು.

ಆ ಸಮಯದಲ್ಲಿ ಅಲ್ಲಿದ್ದ ವಾನರರು ಬೇರೆ ಸ್ಥಳದಲ್ಲಿ ಸುತ್ತಾಡಿ, ರಾತ್ರಿ ವೇಳೆಗೆ ಮಾವಿನ ಮರದ ಬಳಿಗೆ ಬಂದಾಗ, ಅಲ್ಲಿ ರಾಜ ಮತ್ತು ಅವನ ಸೈನ್ಯವನ್ನು ಕಂಡರು. ಅವುಗಳು ಹಸಿವು ತಾಳಲಾರದೆ ಎಚ್ಚರಿಕೆಯಿಂದ ಮರವನ್ನು ಹತ್ತಿ, ಹಣ್ಣುಗಳನ್ನು ತಿನ್ನತೊಡಗಿದವು. ಆದರೆ ಒಂದು ಕಪಿಯು ಅಭ್ಯಾಸ ಬಲದಿಂದ ಬೀಜವನ್ನು ಕೆಳಕ್ಕೆ ಎಸೆದಾಗ ಮಲಗಿದ್ದ ರಾಜನ ಮೇಲೆ ಬಿದ್ದಿತು. ಎಚ್ಚೆತ್ತ ಆತನು ಕಪಿಗಳು ಮಾವು ತಿನ್ನುವುದನ್ನು ಕಂಡು ಅತಿಯಾಗಿ ಕೋಪಗೊಂಡನು. ಕೂಡಲೇ ಹೀಗೆ ಆಜ್ಞಾಪಿಸಿದನು: ಈ ಕೋತಿಗಳನ್ನೆಲ್ಲಾ ಕೊಲ್ಲಿ, ನಾಳೆ ಕೋತಿ ಮಾಂಸದ ಜೊತೆಗೆ ಮಾವು ತಿನ್ನೋಣ ಎಂದನು. ಭಟರು ಬಾಣಗಳನ್ನು ಬಿಡತೊಡಗಿದರು. ಕೋತಿಗಳೆಲ್ಲಾ ಹೆದರಿದವು. ದೊಡ್ಡ ರೆಂಬೆಯ ಮರೆಯಲ್ಲಿ ಎಲ್ಲವೂ ರಕ್ಷಣೆ ಪಡೆದವು. ಆದರೂ ಅಲ್ಲಿಯೂ ಸುರಕ್ಷಿತೆ ಎಲ್ಲಿಯವರೆಗೆ, ಹೀಗಾಗಿ ಬೋಧಿಸತ್ವರಿಗೆ ಶರಣು ಹೇಳಿದವು. ಆಗ ಭೋಧಿಸತ್ವರು ಓ ಸೋದರರೇ, ಹೆದರದಿರಿ ನಾನು ಕಾಪಾಡುವೆನು, ಅಲ್ಲಿಯವರೆಗೆ ಇದೇ ಮರೆಯಲ್ಲಿರಿ ಎಂದು ಆಜ್ಞಾಪಿಸಿ, ಮಾವಿನ ಮರದ ತುದಿಗೆ ಏರಿ, ಒಂದು ಬಾಗಿದ ರೆಂಬೆಯಲ್ಲಿ ದುಮುಕಿ, ಅದರಿಂದಾದ ಎಸೆತಕ್ಕೆ ಹಾರಿ, ಗಂಗಾನದಿಯ ತೀರದ ಮರವೊಂದಕ್ಕೆ ದುಮುಕಿದನು. ನಂತರ ಆ ಮರದಿಂದ, ಈ ಮರಕ್ಕೆ ಆಗುವ ದೂರವನ್ನು ಲೆಕ್ಕಾಚಾರ ಹಾಕಿ ಅಲ್ಲಿದ್ದ ಬಳ್ಳಿಗಳನ್ನು ಸೇರಿಸಕೊಂಡು ಸೊಂಟಕ್ಕೆ ಕಟ್ಟಿಕೊಂಡು, ಆ ಮರದಿಂದ, ಮಾವಿನ ಮರಕ್ಕೆ ದೊಂಬಾರ ನೆಗೆತ ಮಾಡಿದನು. ಆದರೆ ಸ್ವಲ್ಪ ಲೆಕ್ಕಾಚಾರ ತಪ್ಪಿ, ಆತನು ಮಾವಿನ ಮರದಲ್ಲಿ ಇಳಿಯಲಾರದೆ, ಕೇವಲ ರೆಂಬೆಯನ್ನು ಹಿಡಿದನು. ಆದರೂ ವಿಷಾಧಿಸದೆ ತನ್ನ ಪಡೆಗೆ, ತನ್ನ ಬೆನ್ನ ಮೇಲಿಂದ ನಡೆದುಕೊಂಡು ಬಳ್ಳಿಯ ಸಹಾಯದಿಂದ ಆ ದಡವನ್ನು ಸೇರಿ ಪ್ರಾಣ ಉಳಿಸಿಕೊಳ್ಳಿ ಎಂದು ಸನ್ನೆ ಮಾಡಿದನು. ಅದರಂತೆಯೇ ಆ ಕಪಿಗಳೆಲ್ಲ ಬೋಧಿಸತ್ವರ ಬೆನ್ನನ್ನು ತುಳಿದುಕೊಂಡು ಬಳ್ಳಿಯಲ್ಲಿ ನೇತಾಡುತ್ತ ಆ ದಡವನ್ನು ತಲುಪಲು ಆರಂಭಿಸಿದವು.


 ಆದರೆ ಆ ಕಪಿ ಗುಂಪಿನಲ್ಲಿ ದುಷ್ಟ ಕೋತಿಯೊಂದು ಸಹಾ ಇತ್ತು. ಅದಕ್ಕೆ ಬೋಧಿಸತ್ವರನ್ನು ಕಂಡರೆ ಈಷರ್ೆಯಿತ್ತು. ಹೀಗಾಗಿ ಅದು ದೊಡ್ಡ ರೆಂಬೆ ಏರಿ, ಅಲ್ಲಿಂದ ಬೋಧಿಸತ್ವರ ಬೆನ್ನಮೇಲೆ ಜೋರಾಗಿ ಧುಮುಕಿತು. ಇದರಿಂದಾಗಿ ಬೋಧಿಸತ್ವರಿಗೆ ಪ್ರಾಣ ಹೋದಂತೆ ಆಯಿತು. ಆದರೂ ಸರ್ವಹಿತಕ್ಕಾಗಿ, ನೋವನ್ನು ಸಹಿಸಿಕೊಂಡು, ರೆಂಬೆ ಮಾತ್ರ ಬಿಡಲಿಲ್ಲ. ಎಲ್ಲರೂ ಹೊರಟ ನಂತರ ಕುಸಿದು ಬಿದ್ದಿತ್ತು.

 ರಾಜನು ಬೋಧಿಸತ್ವರ ಈ ಪರಾಕ್ರಮ, ನಾಯಕತ್ವ, ಬುದ್ಧಿಮತ್ತತೆ, ತನ್ನ ಗುಂಪಿಗಾಗಿ ತನ್ನನ್ನು ಅಪರ್ಿಸಿಕೊಂಡಿತ್ತು. ಈ ಎಲ್ಲವನ್ನು ಬಹುವಾಗಿ ಮೆಚ್ಚಿ ಆ ವಾನರನ ಆರೈಕೆ ಮಾಡಿದನು. ರಾಜನು ಮಾತನಾಡಿಸಿದಾಗ ಅದು ಹೀಗೆ ಹೇಳಿ ಮಡಿಯಿತು ನಾಯಕನಾದವನು ತನ್ನ ಹಿಂಡಿನ ಎಲ್ಲರ ಬಗ್ಗೆ ಕ್ಷೇಮ ಚಿಂತಿಸಿ, ಸುಖವನ್ನುಂಟು ಮಾಡಬೇಕು ಎಂದು. ರಾಜನು ಗೌರವದಿಂದ ಬೋಧಿಸತ್ತರಿಗೆ ಚೈತ್ಯ ಕಟ್ಟಿಸಿದನು. 

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....