ದಾನ ಪಾರಮಿ
ಬೋಧಿಸತ್ವರ ಹೃದಯವು ಸದಾ ಪರಹಿತಕ್ಕೆ ಮಿಡಿಯುತ್ತಿರುತ್ತದೆ. ಪರಹಿತಕ್ಕಾಗಿಯೇ ಶ್ರಮಿಸುವ ಏಕೈಕ ಜೀವಿಯೇ ಬೋಧಿಸತ್ವ ಆಗಿದ್ದಾರೆ.
ಬೋಧಿಸತ್ವರು ದಾನವನ್ನು ಮೂರು ಉದ್ದೇಶಕ್ಕಾಗಿ ಮಾಡುತ್ತಾರೆ.
1.
ಅನುತ್ತರವಾದ ಸಮ್ಯಕ್ ಸಂಬೋಧಿ ಸಾಧಿಸಲು.
2.
ದಾನದಿಂದ ಹೃದಯ (ಕರುಣೆಯನ್ನು)ವನ್ನು ಪರಿಪೂರ್ಣಗೊಳಿಸುವುದು, ವ್ಯಕ್ತಿತ್ವದ ಪರಿಪೂರ್ಣತೆಗಾಗಿ.
3.
ಪರರ ಹಿತಕ್ಕಾಗಿಯೇ ದಾನ ಆಚರಿಸುವುದು.
ದಾನಕ್ಕಾಗಿ ಈ ಮೂರು ಉದ್ದೇಶಗಳಿದ್ದರೂ ಸಹಾ ನಿಜವಾದ ಉದ್ದೇಶವು ಲೋಕ ಕಲ್ಯಾಣವೇ ಆಗಿದೆ. ಹೇಗೆಂದರೆ ಅವರು ಪರಿಪೂರ್ಣ ವ್ಯಕ್ತಿತ್ವ ಪಡೆಯಲು ಹಂಬಲಿಸುವುದು ಲೋಕ ಹಿತಾರ್ಥಕ್ಕಾಗಿಯೇ ಆಗಿದೆ. ಹಾಗು ಅವರು ಅನುತ್ತರ ಸಮ್ಯಕ್ ಸಂಬೋಧಿ ಹಂಬಲಿಸುವುದು ಸಹಾ ಸರ್ವರನ್ನೂ ದುಃಖದಿಂದ ರಕ್ಷಿಸುವುದಕ್ಕೇ ಆಗಿದೆ.
ದಾನಗಳಲ್ಲಿ ಮೂರು ವಿಧಗಳಿವೆ:
1. ಆಮಿಷದಾನ 2. ಅಭಯದಾನ 3. ಧಮ್ಮದಾನ.
ಬೋಧಿಸತ್ವರು ಈ ಮೂರನ್ನೂ ಸಹಾ ಪರಿಪೂರ್ಣಗೊಳಿಸುತ್ತಾರೆ. ಅವರ ಆ ಸಾಹಸಗಳನ್ನೆಲ್ಲಾ ನಾವು ಜಾತಕ ಕಥೆಗಳಲ್ಲಿ ತಿಳಿಯಬಹುದು.
ಹಾಗೆಯೇ ದಾನದಲ್ಲಿ ಮತ್ತೆ ಮೂರು ವಿಧವಿದೆ.
ಹಾಗೆಯೇ ದಾನಪಾರಮಿಯಲ್ಲಿ ಮೂರು ಹಂತಗಳಿವೆ:
1. ದಾನಪಾರಮಿ 2. ದಾನ ಉಪಪಾರಮಿ 3. ದಾನ ಪರಮತ್ಥ ಪಾರಮಿ.
1. ದಾನ ಪಾರಮಿ :
ಈ ಪಾರಮಿಯನ್ನು ಪರಿಪೂರ್ಣಗೊಳಿಸಲು ಬೋಧಿಸತ್ವರು ತಮ್ಮ ಎಲ್ಲಾ ಐಶ್ವರ್ಯ, ಅಧಿಕಾರ, ಅಷ್ಟೇ ಏಕೆ? ಪತ್ನಿ ಹಾಗು ಮಕ್ಕಳನ್ನು ಸಹಾ ದಾನ ಮಾಡಿಬಿಡುತ್ತಾರೆ. ಇದಕ್ಕೆ ವೆಸ್ಸಂತರ ಜಾತಕವೇ ಸಾಕ್ಷಿಯಾಗಿದೆ. ಅದರಲ್ಲಿ ವೆಸ್ಸಂತರ ಬೋಧಿಸತ್ವರು ಸಮ್ಮಾಸಂಬೋಧಿಗಾಗಿ ತಮ್ಮ ಪತ್ನಿ, ಪುತ್ರ ಹಾಗು ಪುತ್ರಿಯನ್ನು ಸಹಾ ದಾನವಾಗಿ ನೀಡಿಬಿಡುತ್ತಾರೆ. ಅವರ ಇಡೀ ಕಾಲ ಪರಹಿತಕ್ಕಾಗಿಯೇ ಆಗಿರುತ್ತದೆ. ವೆಲಾಮ ಜಾತಕದಲ್ಲಿ ಬೋಧಿಸತ್ತರು ಪ್ರತಿಯೊಂದು 84,000 ಸಂಖ್ಯೆಯಲ್ಲಿ ಐಶ್ವರ್ಯ, ಆಹಾರ, ವಸ್ತ್ರ, ಪಾನಿಯ, ಔಷಧಿ, ವಾಹನ, ದೀಪಗಳು ಇತ್ಯಾದಿ ದಾನ ಮಾಡುತ್ತಿರುತ್ತಾರೆ. ತಮ್ಮ ಹಿಂದಿನ ಒಂದು ಜನ್ಮದಲ್ಲಿ ಹುಟ್ಟಿದ ಸ್ವಲ್ಪ ಸಮಯದಲ್ಲೇ ತಾಯಿಗೆ ಹೀಗೆ ಕೇಳುತ್ತಾರೆ: ಅಮ್ಮ, ನಾನು ದಾನ ಮಾಡಬೇಕು, ಇಲ್ಲಿ ಬೇಕಾದಷ್ಟು ಇದೆಯಲ್ಲವೆ? ಎಂದು. ಅವರ ದಾನ ಪರಾಕ್ರಮವನ್ನು ಜಾತಕ ಕಥೆಗಳನ್ನು ಓದಿಯೇ ಸವಿಯಬೇಕಾಗಿದೆ. ಔಷಧಕುಮಾರರಾಗಿ ಹುಟ್ಟಿರುವ ಸಮಯದಲ್ಲಿ ಅವರು ಹುಟ್ಟುತ್ತಲೇ ಮೂಲಿಕೆಯೊಂದನ್ನು ಹಿಡಿದುಕೊಂಡೇ ಹುಟ್ಟಿರುತ್ತಾರೆ. ಅದರ ಪರಿಣಾಮವಾಗಿ ಅಸಂಖ್ಯಾತ ಜನರಿಗೆ ರೋಗವು ವಾಸಿಯಾಗುತ್ತದೆ. ಹೀಗೆ ಅವರು ತಮ್ಮ ಐಶ್ವರ್ಯ, ಐಶ್ವರ್ಯದಿಂದ ಲಭಿಸುವ ಸರ್ವವನ್ನು, ಕಾಲವನ್ನು, ಪತ್ನಿ ಪುತ್ರರನ್ನು, ತಮ್ಮ ಜ್ಞಾನವನ್ನು ಪರಹಿತಕ್ಕಾಗಿಯೇ ಮಿಸಲಾಗಿಡುತ್ತಾರೆ.
2. ದಾನ ಉಪಪಾರಮಿ:
ಇಲ್ಲಿ ಬೋಧಿಸತ್ವರು ತಮ್ಮ ರಕ್ತ ಹಾಗು ಅಂಗಾಗಗಳನ್ನು ದಾನವಾಗಿಸಿ ನೀಡಬೇಕಾಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಶಿಬಿ (ಸಿಬಿ) ಬೋಧಿಸತ್ತರ ಘಟನೆಯಾಗಿದೆ. ಅದರಲ್ಲಿ ಒಂದು ಕಣ್ಣು ದಾನವಾಗಿ ಕೇಳಿದಾಗ, ಬೋಧಿಸತ್ವರು ಎರಡನ್ನು ದಾನವಾಗಿ ನೀಡುತ್ತಾರೆ. ಇನ್ನೊಂದು ಜಾತಕದಲ್ಲಿ ಬಾಯಾರಿದವರಿಗೆ ನೀರು ಸಿಗದಿದ್ದಾಗ ತಮ್ಮ ರಕ್ತವನ್ನೇ ಕುಡಿಸಿ ಬಾಯಾರಿಕೆ ನೀಗಿಸುತ್ತಾರೆ. ಹೀಗೆ ಇಲ್ಲಿ ಬೋಧಿಸತ್ವರು ಬುದ್ಧತ್ವಕ್ಕಾಗಿ ತಮ್ಮ ದೇಹದ ಅಂಗಾಂಗಗಳನ್ನೇ ಅತ್ಯಂತ ಆನಂದವಾಗಿ ದಾನ ನೀಡಲು ಸಿದ್ಧರಾಗಿರುತ್ತಾರೆ.
3. ದಾನ ಪರಮತ್ಥ ಪಾರಮಿ :
ಇಲ್ಲಿ ಬೋಧಿಸತ್ವರು ದಾನಕ್ಕಾಗಿ ತಮ್ಮ ಪ್ರಾಣವನ್ನೇ, ಜೀವವನ್ನೇ ತ್ಯಾಗ ಮಾಡುತ್ತಾರೆ. ಇಂತಹ ಅನೇಕ ಉದಾಹರಣೆಗಳನ್ನು ನಾವು ಜಾತಕ ಕಥೆಗಳಲ್ಲಿ ಕಾಣಬಹುದು. ಖದಿರಂಗಾರ ಜಾತಕದಲ್ಲಿ ಅವರು ಪಚ್ಚೇಕ ಬುದ್ಧರಿಗೆ ಆಹಾರ ದಾನ ನೀಡಲು ಬೆಂಕಿ ದಾಟುತ್ತ ಜೀವವನ್ನು ಲೆಕ್ಕಿಸದೆ ದಾನ ನೀಡುತ್ತಾರೆ. ಆದರೆ ಅವರು ಅದರಲ್ಲಿ ಜೀವದಿಂದ ಉಳಿಯುತ್ತಾರೆ. ಅವರ ಮನಸ್ಥಿತಿಯು ಎಲ್ಲದಕ್ಕೂ ಸಿದ್ಧವಾಗಿತ್ತು.
ದಾನ ಪಾರಮಿತ ಸಾಧನೆ
ಇಲ್ಲಿ ಬೋಧಿಸತ್ವರು ಆಮಿಷದಾನ, ಅಭಯದಾನ ಮತ್ತು ಧಮ್ಮದಾನ ಮೂರರಲ್ಲೂ ಪರಿಪೂರ್ಣತೆ ಸಾಧಿಸುತ್ತಾರೆ.
ದಾನದ ರೀತಿ : ಅವರು ಕೇಳಿದಾಗ ತಪ್ಪದೆ ದಾನ ಮಾಡುತ್ತಾರೆ. ಕೇಳದೆ ಇದ್ದಾಗಲೂ ಪರಿಸ್ಥಿತಿ ಅರ್ಥಮಾಡಿಕೊಂಡು ದಾನ ನೀಡುತ್ತಾರೆ. ಅವರು ಮಾತಿಗೆ ತಪ್ಪದಂತೆ ಹೇಳಿದ್ದನ್ನೇ ನೀಡುತ್ತಾರೆ. ಅವರು ತುಚ್ಛವಾಗಿರುವುದನ್ನು ದಾನವಾಗಿ ನೀಡುವುದಿಲ್ಲ. ಉತ್ಕೃಷ್ಟವಾಗಿರುವುದನ್ನೇ ದಾನ ಮಾಡುವರು. ಅಗತ್ಯವಾಗಿರುವುದನ್ನು ದಾನ ನೀಡುತ್ತಾರೆ. ಆನಂದಿತರಾಗಿ ದಾನ ನೀಡುತ್ತಾರೆ. ಸಾಕಷ್ಟು ಪ್ರಮಾಣದಲ್ಲಿ ದಾನ ನೀಡುತ್ತಾರೆ. ಕೊರತೆಯಿದ್ದರೆ ಎಲ್ಲರಿಗೂ ಸಮಾನವಾಗಿ ಹಂಚುತ್ತಾರೆ. ದಾನಕ್ಕೆ ಅರ್ಹರಾದ ಎಲ್ಲರಿಗೂ ದಾನ ನೀಡುತ್ತಾರೆ. ಅವರು ಮನಸ್ಸಿನಲ್ಲಿ ಮೋಸವಿಟ್ಟುಕೊಂಡು ದಾನ ಮಾಡುವುದಿಲ್ಲ. ನಗುಮೊಗದಿಂದ ದಾನ ಮಾಡುತ್ತಾರೆ. ಪ್ರಿಯವಾದ ನುಡಿಯ ಸಹಿತ ದಾನ ಮಾಡುತ್ತಾರೆ. ಗೃಹಸ್ಥರಿಗೆ ಯೋಗ್ಯವಾದುದು ಯಾವುದೋ ಅದನ್ನೇ ಗೃಹಸ್ಥರಿಗೂ, ಭಿಕ್ಷುಗಳಿಗೆ ಯೋಗ್ಯವಾದುದನ್ನು ಭಿಕ್ಷುಗಳಿಗೂ ನೀಡುವರು. ಆದರೆ ಅವರು ಕಶ್ಮಲ ಮನದಿಂದ ದಾನ ಮಾಡುವುದಿಲ್ಲ. ಕೋಪದಿಂದ ದಾನ ಮಾಡುವುದಿಲ್ಲ, ಕಟು ಮಾತು ಆಡುತ್ತ ದಾನ ಮಾಡುವುದಿಲ್ಲ. ಅವರಲ್ಲಿ ದಾನ ಮಾಡುವಾಗ ಅಥವಾ ಆನಂತರವೂ ಯಾವುದೇ ಲೋಭವಿರುವುದಿಲ್ಲ. ಅವರು ದಾನ ನೀಡುವುದು ಲಾಭಕ್ಕಲ್ಲ, ಪ್ರಶಂಸೆಗಲ್ಲ, ಕೀತರ್ಿಗಲ್ಲ, ಸ್ವರ್ಗಕ್ಕಲ್ಲ, ಸುಖಕ್ಕಲ್ಲ, ಶ್ರೀಮಂತರಾಗಲು ಅಲ್ಲ. ಅವರ ದಾನದ ಗುರಿ ಒಂದೇ ಆಗಿರುತ್ತದೆ, ಅದೇ ಬುದ್ಧತ್ವ.
ಬಾಹ್ಯ ವಸ್ತುಗಳ ದಾನ (ಆಮಿಷ ದಾನ)
ದಾನವು ಎರಡು ವಿಧವಾಗಿ ವಿಂಗಡಿತವಾಗುತ್ತದೆ.
1. ಬಾಹ್ಯ ವಸ್ತುಗಳ ದಾನ 2. ಆಂತರಿಕ ವಸ್ತುವಿನ ದಾನ
ಬಾಹ್ಯ ವಸ್ತುಗಳು ಮತ್ತೆ ಆರು ವಿಧವಾಗಿ ವಿಂಗಡಿತವಾಗುತ್ತದೆ. ಅವೆಂದರೆ: ಕಣ್ಣಿನಿಂದ ನೋಡುವಂತಹುದು, ಕಿವಿಯಿಂದ ಕೇಳುವಂತಹುದು, ಮೂಗಿನಿಂದ ಆಘ್ರಾಣಿಸುವಂತಹುದು, ನಾಲಿಗೆಯಿಂದ ರುಚಿಸುವಂತಹುದು, ದೇಹದಿಂದ ಸ್ಪಶರ್ಿಸುವಂತಹುದು ಮತ್ತು ಮಾನಸಿಕ ವಿಷಯ.
ಇವನ್ನು ಸರಳವಾಗಿ ಹೇಳುವುದಾದರೆ ಆಹಾರ, ಪಾನಿಯ, ವಸ್ತ್ರ, ವಾಹನ, ಹೂಹಾರ, ಸುಗಂಧ, ಔಷಧಿ, ಹಾಸಿಗೆ, ವಸತಿ ಮತ್ತು ದೀಪ. ಇವು ಪ್ರಾಥಮಿಕವಾಗಿ ಪ್ರತಿಯೊಬ್ಬರಿಗೂ ಬೇಕಾಗಿರುವಂತಹುದು. ಇವುಗಳ ದಾನವನ್ನು ಬಾಹ್ಯ ವಸ್ತುಗಳ ದಾನ ಅಥವಾ ಆಮಿಷದಾನ ಎನ್ನುತ್ತಾರೆ. ಇವು ಐದು ಇಂದ್ರಿಯ ವಿಷಯಗಳ ಅಡಿಯಲ್ಲಿ ಬರುವುದು.
ಎಲ್ಲಾ ಭೋದಿಸತ್ವರು ಧನದಾನ, ಧಾನ್ಯದಾನ, ಸಂತಾನದಾನ, ಭಾರ್ಯೆದಾನ, ರಾಜ್ಯದಾನ ಮತ್ತು ಅಂಗಗಳ ದಾನಗಳನ್ನು ಖಂಡಿತವಾಗಿ ನೀಡುತ್ತಾರೆ. ಹಾಗೆಯೇ ಇಲ್ಲಿ ಬೋಧಿಸತ್ವರು ದಾನಪೂರ್ಣತೆಗಾಗಿ ದಾಸರನ್ನು, ಸೇವಕರನ್ನು ದಾನವಾಗಿ ನೀಡುತ್ತಾರೆ. ಅಷ್ಟೇ ಅಲ್ಲ, ಪತ್ನಿ ಮತ್ತು ಮಕ್ಕಳನ್ನು ಸಹಾ ದಾನವಾಗಿ ನೀಡುತ್ತಾರೆ. ಒಟ್ಟಾರೆ ತಮ್ಮದೆಂದು ಅನಿಸಿಕೊಳ್ಳುವ ಎಲ್ಲವನ್ನೂ ಸಹಾ ಬೋಧಿಸತ್ವರು ಪರಹಿತಕ್ಕಾಗಿ ದಾನವಾಗಿ ನೀಡುತ್ತಾರೆ. ಆದರೂ ಹಾಗೆ ದಾನ ಮಾಡಿದರೂ ಇಚ್ಛೆಪಡದವರನ್ನು ಅವರು ದಾನ ಮಾಡುವುದಿಲ್ಲ. ಹಾಗೂ ನರಭಕ್ಷಕರಿಗೆ ದಾನ ಮಾಡುವುದಿಲ್ಲ. ಕ್ರೂರಿಗಳಿಗೆ, ಸ್ವಾಥರ್ಿಗಳಿಗೆ, ಹುಚ್ಚರಿಗೆ ದಾನವಾಗಿ ನೀಡುವುದಿಲ್ಲ. ಬದಲಾಗಿ ಉತ್ತಮ ವ್ಯಕ್ತಿಗೆ ಸತ್ಪುರುಷನಿಗೆ ದಾನವಾಗಿ ನೀಡುತ್ತಾರೆ.
ಇಲ್ಲಿ ಭೋಧಿಸತ್ವರು ಜ್ಞಾನ ದಾನವನ್ನು ಮಾಡುತ್ತಾರೆ. ಮಾನವರಿಗೆ ನೀಡುವಂತಹ ಶ್ರೇಷ್ಠದಾನವೆಂದರೆ ಅದು ಜ್ಞಾನದಾನವೇ ಆಗಿದೆ. ಇಲ್ಲಿ ಬೋಧಿಸತ್ವರು ಉಚಿತವಾಗಿ ಜ್ಞಾನದಾನ ಮಾಡುತ್ತಾರೆ. ಅಥವಾ ಜ್ಞಾನಕ್ಕೆ ಬೇಕಾಗುವ ವೆಚ್ಚವನ್ನು ತಾವೇ ನೋಡಿಕೊಳ್ಳುತ್ತಾರೆ. ಹಾಗೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುತ್ತಾರೆ. ಹೀಗೆ ಬೋಧಿಸತ್ವರು ಬಾಹ್ಯದಿಂದ ಲಭಿಸುವ ಎಲ್ಲವನ್ನೂ ದಾನವಾಗಿ ನೀಡುತ್ತಾರೆ.
ಆಂತರಿಕ ವಸ್ತುಗಳ ದಾನ (ಅಭಯದಾನ)
ಇಲ್ಲಿ ಬೋಧಿಸತ್ವರು ತಮ್ಮ ಅಂಗಗಳಾದ, ರಕ್ತ, ಮಾಂಸ, ಕಣ್ಣು, ಹೃದಯ ಇತ್ಯಾದಿಗಳನ್ನು ಕಂಪಿಸದೆ ದಾನವಾಗಿ ನೀಡಿಬಿಡುತ್ತಾರೆ. ಪರರ ಹಿತಕ್ಕಾಗಿ, ದಾನದ ಪರಿಪೂರ್ಣತೆಗಾಗಿ ಮತ್ತು ಬುದ್ಧತ್ವಕ್ಕಾಗಿ ಅವರು ಹೀಗೆ ದಾನವಾಗಿ ನೀಡುತ್ತಾರೆ. ಆದರೆ ವ್ಯರ್ಥವಾಗಿ ಕತ್ತರಿಸಿ ದಾನ ನೀಡುವುದಿಲ್ಲ. ಬದಲಾಗಿ ಯಾಚಕನಿಗೆ ಒಳಿತಾಗುವುದಾದರೆ ಮಾತ್ರ ದಾನ ನೀಡುತ್ತಾರೆ. ಹಾಗು ಹುಚ್ಚನೊಬ್ಬನು ಅಥವಾ ದುಷ್ಟನೊಬ್ಬನು ಅಂಗದಾನ ಯಾಚಿಸಿದರೆ ದಾನ ನೀಡುವುದಿಲ್ಲ. ಇಲ್ಲಿ ದಾನದಿಂದ ಯಾಚಕನಿಗೆ ಲಾಭವಾಗಬೇಕು ಮತ್ತು ದಾನಿಗೂ ಪುಣ್ಯ ಲಭಿಸಬೇಕಾಗಿದೆ.
ಅಭಯದಾನದ ಇನ್ನೊಂದು ವಿಧವೇ ಭಯವನ್ನು ಹೋಗಲಾಡಿಸುವಂತಹುದು. ಇಲ್ಲಿ ಬೋಧಿಸತ್ವರು ಜೀವಿಗಳು ಭಯಗೊಂಡಾಗ ಸಮಾಧಾನಿಸುತ್ತಾರೆ, ಅಗ್ನಿಯಿಂದ ಕಾಪಾಡುತ್ತಾರೆ, ಜಲಗಂಡಾಂತರದಿಂದ ಕಾಪಾಡುತ್ತಾರೆ, ಶತ್ರುಗಳಿಂದ, ಶಸ್ತ್ರಗಳಿಂದ ಕಾಪಾಡುತ್ತಾರೆ. ಕ್ರೂರ ಪ್ರಾಣಿಗಳಿಂದ ಕಾಪಾಡುತ್ತಾರೆ. ಭೂತ ಪಿಶಾಚಿಗಳಿಂದಲೂ ಕಾಪಾಡುತ್ತಾರೆ. ಹಾಗೆಯೇ ದುಷ್ಟ ರಾಜಾಧಿಕಾರಿಗಳಿಂದ ಮತ್ತು ಕಳ್ಳರಿಂದ, ಕಾಪಾಡುತ್ತಾರೆ. ಒಟ್ಟಾರೆ ಅಪಾಯ, ಸಂಕಷ್ಟಗಳಿಂದ ಕಾಪಾಡುತ್ತಾರೆ.
ಧಮ್ಮ ದಾನ
ಎಲ್ಲಾ ದಾನಕ್ಕಿಂತಲೂ ಧಮ್ಮದಾನವು ಶ್ರೇಷ್ಠವೆಂದು ಬುದ್ಧ ಭಗವಾನರು ಹೇಳಿದ್ದಾರೆ. ಏಕೆಂದರೆ ಧಮ್ಮದಾನದಿಂದ ಇಹ ಮತ್ತು ಪರಲೋಕದ ಸರ್ವ ದುಃಖಗಳು ನಿವಾರಣೆಯಾಗುತ್ತವೆ. ಧಮ್ಮದಾನವೆಂದರೆ ಬುದ್ಧರ ಬೋಧಿ ಜ್ಞಾನದ ಬೋಧನೆಯಾಗಿದೆ.
ಇಲ್ಲಿ ಬೋಧಿಸತ್ವರು ದಾನಕ್ಕೆ ಸ್ಫೂತರ್ಿಯಾಗುವಂತೆ ದಾನದ ಮೌಲ್ಯಗಳ ಬಗ್ಗೆ ಬೋಧಿಸುತ್ತಾರೆ. ನಂತರ ದುಶ್ಶೀಲತೆಯ ಅಪಾಯಗಳನ್ನು ವಿವರಿಸುತ್ತ, ಶೀಲವಂತಿಕೆಯ ಮಹತ್ವತೆಯನ್ನು ವಿವರಿಸುತ್ತಾರೆ. ಅತಿ ಇಂದ್ರೀಯ ಭೋಗಗಳ ಅಪಾಯವನ್ನು ಮತ್ತು ಇಂದ್ರೀಯ ನಿಗ್ರಹದ ಸುಲಾಭಗಳನ್ನು ಬೋಧಿಸುತ್ತಾರೆ. ನಂತರ ತ್ಯಾಗ, ವೈರಾಗ್ಯಗಳ ಮಹೋನ್ನತೆಯನ್ನು ವಿವರಿಸುತ್ತಾರೆ. ನಂತರ ಆರ್ಯಸತ್ಯಗಳ ಅಥವಾ ಬೋಧಿಪಕ್ಖೀಯಗಳ ಶ್ರೇಷ್ಠತೆಯನ್ನು ಬೋಧಿಸುತ್ತಾರೆ. ಹೀಗೆ ಅವರು ಧಮ್ಮದಾನವನ್ನು ಬೋಧಿಸುವುದಷ್ಟೇ ಅಲ್ಲ, ಅದಕ್ಕೆ ಮುನ್ನ ಅವರು ಅವನ್ನೆಲ್ಲಾ ಪಾಲಿಸಿಯೂ ಇರುತ್ತಾರೆ.
ಕೇವಲ ಮಹೋನ್ನತೆಯ ಜ್ಞಾನವಾದ ಧಮ್ಮದಾನ ಅಷ್ಟೇ ಅಲ್ಲ, ಬೋಧಿಸತ್ವರು ಲೌಕಿಕ ವಿಷಯ ಎಲ್ಲಾ ಜ್ಞಾನಗಳನ್ನು ಅಭ್ಯಸಿಸುತ್ತಾರೆ. ಅಗಾಧ ಜ್ಞಾನವನ್ನು ಪಡೆದಿರುತ್ತಾರೆ, ವಿದ್ಯಾಕಾಂಕ್ಷಿಗಳಿಗೆ ಆ ಜ್ಞಾನವೆಲ್ಲವನ್ನು ಉಚಿತವಾಗಿಯೇ ದಾನ ಮಾಡುತ್ತಾರೆ.
ದಾನದಿಂದಾಗಿ ಬೋಧಿಸತ್ವರಿಗೆ ಲಭಿಸುವ ಲಾಭಗಳು
4
ಬೋಧಿಸತ್ವರು ಎಂದಿಗೂ ಅವಿಚಿ ನರಕದಲ್ಲಿ ಹುಟ್ಟುವುದಿಲ್ಲ.
4
ಬೋಧಿಸತ್ವರು ಎಂದಿಗೂ ಅರೂಪ ಲೋಕಗಳಲ್ಲಿ ಹುಟ್ಟುವುದಿಲ್ಲ.
4
ಬೋಧಿಸತ್ವರು ಎಂದಿಗೂ ಅಸುರರಾಗಲಿ ಅಥವಾ ಹಸಿವು ಬಾಯಾರಿಕೆಯ ಪ್ರೇತಗಳಾಗಿ ಹುಟ್ಟುವುದಿಲ್ಲ.
4
ಬೋಧಿಸತ್ವರು ದುರ್ಗತಿಯಲ್ಲಿ ಹುಟ್ಟಿದರೂ ಚಿಕ್ಕ ಆಕಾರದ ಜೀವಿಯಾಗಿ ಹುಟ್ಟುವುದಿಲ್ಲ.
4
ಬೋಧಿಸತ್ವರು ಮಾನವರಾಗಿ ಹುಟ್ಟಿದರೂ ಅಂಧರಾಗಿ ಹುಟ್ಟುವುದಿಲ್ಲ.
4
ಬೋಧಿಸತ್ವರು ಮಾನವರಾಗಿ ಹುಟ್ಟಿದರೂ ಕಿವುಡರಾಗಿ, ಮೂಕರಾಗಿ, ಅಂಗಹೀನರಾಗಿ ಹುಟ್ಟುವುದಿಲ್ಲ.
4
ಬೋಧಿಸತ್ವರು ಎಂದಿಗು ಸ್ತ್ರೀಯಾಗಿ ಆಗಲಿ, ನಪುಂಸಕರಾಗಿ ಆಗಲಿ ಮತ್ತು ದ್ವಿಲಿಂಗಿಯಾಗಿ ಹುಟ್ಟಲಾರರು.
4
ಬೋಧಿಸತ್ವರು ಎಂದಿಗೂ ಪಂಚ ಮಹಾ ಪಾತಕಗಳನ್ನು ಮಾಡಲಾರರು.
4
ಬೋಧಿಸತ್ವರು ಜೀವನದಲ್ಲಿ ಪರಿಶುದ್ಧ ವ್ಯವಹಾರಿಯಾಗಿರುತ್ತಾರೆ, ದೋಷರಹಿತ ರಾಗಿರುತ್ತಾರೆ.
4
ಬೋಧಿಸತ್ವರು ಎಂದಿಗೂ ಮಿಥ್ಯಾದೃಷ್ಟಿಯಿಂದ ಕೂಡಿರುವುದಿಲ್ಲ.
4
ಬೋಧಿಸತ್ವರು ಸುಗತಿಯಲ್ಲಿ ಜನಿಸಿದರೂ, ಅಸನ್ಯಾಸತ್ತರಾಗಿ ಜನಿಸುವುದಿಲ್ಲ.
ಅಂತಹ ಮಹಾಮಹಿಮರು ತ್ಯಾಗದಲ್ಲೇ ಬಾಗಿರುತ್ತಾರೆ. ಎಲ್ಲಾ ಲೋಕಗಳ ಲಾಲಸೆಯಿಂದ ಮುಕ್ತರಾಗಿ, ಪರಹಿತದಲ್ಲೇ ತೊಡಗಿ ಪಾರಮಿಯ ಪರಿಪೂರ್ಣತೆಗೆ ಶ್ರಮಿಸುತ್ತಾರೆ.
ಬೋಧಿಸತ್ವರಿಗೆ ಸಿಗುವ ದಾನದ ಪರಮ ಲಾಭಗಳು
ಬೋಧಿಸತ್ವರು ಮಾನವರಾಗಿ ಜನ್ಮಿಸಿದಾಗ ದೀಘರ್ಾಯುವಾಗಿ, ಸೌಂದರ್ಯದಿಂದ, ಸುಖದಿಂದ ಬಲದಿಂದ ಪ್ರಜ್ಞಾಶಕ್ತಿಯಿಂದ ಕೂಡಿರುತ್ತಾರೆ. ವಸ್ತ್ರದಾನದಿಂದಾಗಿ ಅವರ ಚರ್ಮವು ಸುವರ್ಣದಿಂದ ಕೂಡಿರುತ್ತದೆ. ವಾಹನ ದಾನಗಳಿಂದಾಗಿ ನಿಬ್ಬಾಣಕ್ಕೆ ವಾಹನವಾದ ಸಮಾಧಿಯಲ್ಲಿ ತೀವ್ರತೆ ಸಾಧಿಸುತ್ತಾರೆ. ಸುಗಂಧಗಳ ದಾನದಿಂದಾಗಿ, ದೇಹದಲ್ಲಿ ಶ್ರೀಗಂಧದ ಪರಿಮಳ ಪಡೆಯುತ್ತಾರೆ. ಹೂಹಾರಗಳ ದಾನದಿಂದಾಗಿ ಸುಲಕ್ಷಣ ದೇಹವನ್ನು ಪಡೆಯುತ್ತಾರೆ. ಆಸನಗಳ ದಾನದಿಂದಾಗಿ ಬೋಧಿಯ ವಜ್ರಾಸನ ಪೀಠವನ್ನು ಪಡೆಯುತ್ತಾರೆ. ಹಾಸಿಗೆಗಳ ದಾನದಿಂದಾಗಿ ತಥಾಗತರ ವಿಶ್ರಾಂತಿಯ ನಿಬ್ಬಾಣ ಪಡೆಯುತ್ತಾರೆ. ವಸತಿ ದಾನಗಳಿಂದ ಜೀವಿಗಳೇ ಅವರಲ್ಲಿ ಶರಣು ಲಾಭ ಪಡೆಯುತ್ತಾರೆ. ದೀಪ ದಾನಗಳಿಂದಾಗಿ ಐದು ರೀತಿಯ ಚಕ್ಷು ಪಡೆಯುತ್ತಾರೆ. ಹಾಗು ವಿಸ್ತಾರವಾದ ಪ್ರಭಾವಳಿಯನ್ನು ಪಡೆಯುತ್ತಾರೆ. ವಿವಿಧ ದಾನದಿಂದಾಗಿ ಬ್ರಹ್ಮಸ್ವರಕ್ಕಿಂತಲೂ ಶ್ರೇಷ್ಠವಾದ ಬುದ್ಧಸ್ವರ ಪಡೆಯುತ್ತಾರೆ. ಔಷದ ದಾನದಿಂದಾಗಿ ನಿಬ್ಬಾಣವನ್ನು ಸಾಧಿಸುತ್ತಾರೆ. ದಾಸರ ದಾನದಿಂದಾಗಿ ಜೀವಿಗಳ ಕಶ್ಮಲ ವಿಮುಕ್ತತೆ ಸಾಧಿಸುತ್ತಾರೆ. ಮಕ್ಕಳ ದಾನದಿಂದಾಗಿ ಸರ್ವಜೀವಿಗಳಲ್ಲೂ ಮಕ್ಕಳನ್ನು ಕಾಣುತ್ತಾರೆ. ಪತ್ನಿ ದಾನದಿಂದಾಗಿ ಸರ್ವ ಲೋಕಗಳಿಗೆ ಒಡೆಯರಾಗುತ್ತಾರೆ, ಲೋಕನಾಥರಾಗುತ್ತಾರೆ. ಅವರು ಚಿನ್ನ, ರತ್ನ, ಮುತ್ತು ಮುಂತಾದ ದಾನ ನೀಡಿ ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾರೆ. ವಿವಿಧ ದಾನಗಳಿಂದ ಸತ್ಪುರುಷ ಲಕ್ಷಣಗಳನ್ನು ಪಡೆಯುತ್ತಾರೆ. ದೇಹದಾನದಿಂದ ಧಮ್ಮಕಾಯ ಪಡೆಯುತ್ತಾರೆ. ಐಶ್ವರ್ಯ ಬಂದಾಗ ದಾನನೀಡಿ ಧಮ್ಮ ಐಶ್ವರ್ಯವನ್ನು ಪಡೆಯುತ್ತಾರೆ. ರಾಜ್ಯ ದಾನ ಮಾಡಿ ಧಮ್ಮ ರಾಜ್ಯ ಗಳಿಸುತ್ತಾರೆ. ವಿಹಾರಗಳ, ತೋಟಗಳ, ಸರೋವರಗಳ ದಾನದಿಂದಾಗಿ ಧ್ಯಾನ ಲಾಭಗಳನ್ನು ಸಾಧಿಸುತ್ತಾರೆ. ಪಾದಗಳ ದಾನದಿಂದಾಗಿ ಬೋಧಿಯೆಡೆಗೆ ಹೆಜ್ಜೆ ಹಾಕುತ್ತಾರೆ. ಕೈಗಳ ದಾನದಿಂದಾಗಿ ಸರ್ವಜೀವಿಗಳನ್ನು ರಕ್ಷಿಸುವ ಸಾಮಥ್ರ್ಯ ಪಡೆಯುತ್ತಾರೆ. ಭೌತಿಕ ಇಂದ್ರಿಯಗಳ ದಾನದಿಂದಾಗಿ ಧಮ್ಮದ ಇಂದ್ರೀಯಗಳನ್ನು ಪಡೆಯುತ್ತಾರೆ. ರಕ್ತಮಾಂಸದ ದಾನದಿಂದಾಗಿ ಸರ್ವರಿಗೆ, ಆಚರಿಸಲ್ಪಡುವ ಸೇವಿಸಲ್ಪಡುವ ಲಾಭ ಪಡೆಯುತ್ತಾರೆ, ಶಿರದಾನದಿಂದಾಗಿ ಸರ್ವ ಶ್ರೇಷ್ಠರಾಗುತ್ತಾರೆ.